ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

GBA Election: ಜಿಬಿಎ ಚುನಾವಣೆ ಮತ್ತೆ ಮುಂದೂಡಿಕೆ ಸಾಧ್ಯತೆ, ಆಯೋಗಕ್ಕೆ ಸರಕಾರದ ಪತ್ರ

ಜನಗಣತಿ ಕಾರ್ಯಕ್ಕೆ ಅಧಿಕ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಕಾಲಾವಧಿಯನ್ನು ಸೆ.30ರವರೆಗೆ ವಿಸ್ತರಿಸಬೇಕೆಂದು ಕೋರಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್‌ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಏ.6ರಂದು ಪತ್ರ ಬರೆದಿದ್ದರು.

ಜಿಬಿಎ

ಬೆಂಗಳೂರು, ಏ.18 : ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಪಂಚ ನಗರ ಪಾಲಿಕೆಗಳಿಗೆ ಸದ್ಯಕ್ಕೆ ಚುನಾವಣೆ (GBA Election) ನಡೆಯುವ ಲಕ್ಷಣ ಕಾಣುತ್ತಿಲ್ಲ. ಕಳೆದ ಐದೂವರೆ ವರ್ಷಗಳಿಂದ ಒಂದಿಲ್ಲೊಂದು ಕಾರಣಗಳ ಮೂಲಕ ಚುನಾವಣೆಯನ್ನು ಮುಂದೂಡಿಕೊಂಡು ಬರಲಾಗುತ್ತಿದೆ. ಇದೀಗ ಸರಕಾರ, ರಾಷ್ಟ್ರೀಯ ಜನಗಣತಿಯನ್ನು (census) ಮುಂದಿಟ್ಟುಕೊಂಡು ಪಂಚ ನಗರ ಪಾಲಿಕೆಗಳ ಚುನಾವಣೆ ಮುಂದೂಡಲು ರಾಜ್ಯ ಚುನಾವಣಾ ಆಯೋಗವನ್ನು ಕೋರಿದೆ.

ರಾಜ್ಯ ಸರಕಾರ ಬಿಬಿಎಂಪಿ ವಿಭಜಿಸಿ, ಜಿಬಿಎ ಅಡಿಯಲ್ಲಿಪಂಚ ನಗರ ಪಾಲಿಕೆಗಳನ್ನು ರಚಿಸಿ 369 ವಾರ್ಡ್‌ಗಳನ್ನು ವಿಂಗಡಣೆ ಮಾಡಿತ್ತು. ಅಲ್ಲದೆ, ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನೂ ಪ್ರಕಟಿಸಿತು. ಇದರಿಂದ ಶೀಘ್ರದಲ್ಲೇ ಚುನಾವಣೆ ನಡೆಯಬಹುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಹಾಗಾಗಿಲ್ಲ.

ಸೆ.30ರವರೆಗೆ ಕಾಲಾವಧಿ ವಿಸ್ತರಣೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯಕ್ಕೆ ಅಧಿಕ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಕಾಲಾವಧಿಯನ್ನು ಸೆ.30ರವರೆಗೆ ವಿಸ್ತರಿಸಬೇಕೆಂದು ಕೋರಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್‌ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಏ.6ರಂದು ಪತ್ರ ಬರೆದಿದ್ದರು.

‘ಜನಗಣತಿ ಕಾರ್ಯವು ಶಾಸನಬದ್ಧ ಕಾರ್ಯವಾಗಿದೆ. ಅಲ್ಲದೆ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಿದೆ. ಇದರಲ್ಲಿಇಡೀ ಆಡಳಿತ ಯಂತ್ರವು ತೊಡಗಲಿದೆ. ಅಲ್ಲದೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನೂ (ಎಸ್‌ಐಆರ್‌) ಏಕಕಾಲದಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ. ಜತೆಗೆ ಮೇ, ಜೂನ್‌ ತಿಂಗಳಲ್ಲಿ ಪರೀಕ್ಷಾ ಕರ್ತವ್ಯಗಳಿಗೆ ಸಿಬ್ಬಂದಿ ನಿಯೋಜಿಸುವುದರಿಂದ ಲಭ್ಯವಿರುವ ಮಾನವಶಕ್ತಿ ಮತ್ತಷ್ಟು ಕಡಿಮೆಯಾಗಲಿದೆ. ಆದ ಕಾರಣ, ಜಿಬಿಎ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾಲಾವಧಿಯನ್ನು ಸೆ.30ರವರೆಗೆ ವಿಸ್ತರಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದರು.

GBA Election: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ; ಮತದಾರರ ಪಟ್ಟಿ ಪ್ರಕಟ

ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಡಾ. ಕೆ.ಜಿ.ಜಗದೀಶ್‌, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್‌.ಹೊನ್ನಾಂಬ ಅವರಿಗೆ ಪತ್ರ ಬರೆದು ಚುನಾವಣಾ ಕಾಲಮಿತಿಯನ್ನು ಸೆ.30ರವರೆಗೆ ವಿಸ್ತರಿಸಬೇಕೆಂದು ಕೋರಿ ಪತ್ರ ಬರೆದಿದ್ದಾರೆ. ಹೀಗಾಗಿ, ಸದ್ಯಕ್ಕೆ ಚುನಾವಣೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ.

ರಾಜ್ಯದ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಕಳೆದ ಐದೂವರೆ ವರ್ಷಗಳಿಂದ ಚುನಾಯಿತ ಕೌನ್ಸಿಲರ್‌ಗಳೇ ಇಲ್ಲ. ಬಿಬಿಎಂಪಿಯ 198 ವಾರ್ಡ್‌ಗಳಿಂದ ಆಯ್ಕೆಯಾಗಿದ್ದ ಚುನಾಯಿತ ಜನಪ್ರತಿನಿಧಿಗಳ ಅಧಿಕಾರಾವಧಿ 2020ರ ಸೆ.10ಕ್ಕೆ ಅಂತ್ಯಗೊಂಡಿತು. ಆಗಿನಿಂದಲೂ ಅಧಿಕಾರಿಗಳೇ ಆಡಳಿತ ನಿರ್ವಹಿಸುತ್ತಿದ್ದಾರೆ.

GBA Elections: ಕೊನೆಗೂ ಜಿಬಿಎ ಚುನಾವಣೆಗೆ ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಸುಪ್ರೀಂ ಕೋರ್ಟ್‌

ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು, ಬಿಬಿಎಂಪಿಗೆ ಪ್ರತ್ಯೇಕ ಕಾಯಿದೆ ರೂಪಿಸಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿತು. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಚುನಾವಣೆಗೆ ವಾರದೊಳಗೆ ನಿಯಮಗಳನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್‌ ರಾಜ್ಯಕ್ಕೆ 2025ರ ಆಗಸ್ಟ್‌ನಲ್ಲೇ ತಾಕೀತು ಮಾಡಿತ್ತು. ಸರಕಾರ ಕೂಡ 2025ರ ಡಿಸೆಂಬರ್‌ನೊಳಗೆ ಚುನಾವಣೆ ನಡೆಸುವುದಾಗಿ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ, ಇದಾಗಿ 4 ತಿಂಗಳು ಕಳೆದರೂ ಚುನಾವಣೆಯ ಕಾವು ಕಂಡುಬರಲಿಲ್ಲ.

ಸರಕಾರ 369 ವಾರ್ಡ್‌ಗಳನ್ನು ವಿಂಗಡಿಸಿ, ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿದ ನಂತರ ಆಕಾಂಕ್ಷಿತ ಅಭ್ಯರ್ಥಿಗಳು ಚುನಾವಣೆ ನಡೆಯಬಹುದೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಈ ಮಧ್ಯೆ ಸರಕಾರವೇ ಚುನಾವಣೆಯ ಕಾಲಾವಧಿಯನ್ನು ವಿಸ್ತರಿಸಲು ಆಯೋಗಕ್ಕೆ ಮನವಿ ಸಲ್ಲಿಸಿದೆ.

ಹರೀಶ್‌ ಕೇರ

View all posts by this author