ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಬೆಂಗಳೂರಿನ ದಾನಿಯಿಂದ 30 ಕೋಟಿ ರೂ. ಮೌಲ್ಯದ ಚಿನ್ನದ ಕಲಾಕೃತಿ ದಾನ

Ayodhya Sri Ram Temple: ಚಿನ್ನದ ಎಲೆಯ ಹಾಳೆಗಳಿಂದ ಲೇಪಿತವಾಗಿರುವ, ಮಾಣಿಕ್ಯ, ಪಚ್ಚೆ, ಹವಳ, ಮುತ್ತು ಹಾಗೂ ವಜ್ರಗಳಿಂದ ಅಲಂಕರಿಸಲಾದ ಅಪರೂಪದ ಶ್ರೀರಾಮನ ಕಲಾಕೃತಿ ಅಯೋಧ್ಯೆ ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಸಜ್ಜಾಗಿದೆ. ಈ ವಿಶಿಷ್ಟ ಕಲಾಕೃತಿಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿ, ಹವ್ಯಾಸಿ ಕಲಾವಿದೆ ಜಯಶ್ರೀ ಫಣೀಶ್ ತಮ್ಮ ಕೈಯ್ಯಾರೆ ನಿರ್ಮಿಸಿದ್ದಾರೆ.

ಶ್ರೀ ರಾಮನ ಮೂರ್ತಿ

ಬೆಂಗಳೂರು, ಡಿ.24: ಕರ್ನಾಟಕ (Karnataka) ಮೂಲದ ದಾನಿಯೊಬ್ಬರು ಅಯೋಧ್ಯೆಯ (Ayodhya Sri Ram Temple) ಶ್ರೀರಾಮ ಮಂದಿರಕ್ಕೆ 30 ಕೋಟಿ ಮೌಲ್ಯದ ಚಿನ್ನದ ರಾಮನ ಕಲಾಕೃತಿಯಯನ್ನು ಕೊಡುಗೆ ನೀಡಿದ್ದಾರೆ. ಈ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ ಮಾಹಿತಿ ನೀಡಿದ್ದು, ವಜ್ರ, ಪಚ್ಚೆ ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ ಹಾಗೂ 8 ಅಡಿ ಅಗಲದ ರಾಮನ ಮೂರ್ತಿಯನ್ನು ದಾನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ (Bengaluru) ರಾಜಾಜಿನಗರ ನಿವಾಸಿ, ಹವ್ಯಾ ಸಿ ಕಲಾವಿದೆ ಜಯಶ್ರೀ ಫಣೀಶ್ ತಮ್ಮ ಕೈಯ್ಯಾರೆ ಇದನ್ನು ನಿರ್ಮಿಸಿ ನೀಡಿದ್ದಾರೆ.

ಚಿನ್ನದ ಎಲೆಯ ಹಾಳೆಗಳಿಂದ ಲೇಪಿತವಾಗಿರುವ, ಮಾಣಿಕ್ಯ, ಪಚ್ಚೆ, ಹವಳ, ಮುತ್ತು ಹಾಗೂ ವಜ್ರಗಳಿಂದ ಅಲಂಕರಿಸಲಾದ ಅಪರೂಪದ ಶ್ರೀರಾಮನ ಕಲಾಕೃತಿ ಅಯೋಧ್ಯೆ ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಸಜ್ಜಾಗಿದೆ. ಈ ವಿಶಿಷ್ಟ ಕಲಾಕೃತಿಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿ, ಹವ್ಯಾಸಿ ಕಲಾವಿದೆ ಜಯಶ್ರೀ ಫಣೀಶ್ ತಮ್ಮ ಕೈಯ್ಯಾರೆ ನಿರ್ಮಿಸಿದ್ದು, ಇದರ ಸಂಪೂರ್ಣ ಹಣಕಾಸು ಸಹಾಯವನ್ನು ಅವರ ಕುಟುಂಬವೇ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.

ತಂಜಾವೂರು ಚಿತ್ರಕಲೆ ಶೈಲಿಯಿಂದ ಪ್ರೇರಣೆ ಪಡೆದ ಈ ರಾಮ ಕಲಾಕೃತಿಯನ್ನು 10 ಅಡಿ ಎತ್ತರ, 6 ಅಡಿ ಅಗಲ ಮತ್ತು 2.5 ಅಡಿ ಆಳ ಹೊಂದಿರುವ ತೇಗದ ಮರದ ಚೌಕಟ್ಟಿನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ರಾಮನ ದೈವಿಕ ರೂಪದೊಂದಿಗೆ ಹನುಮಾನ್, ಗರುಡ ಹಾಗೂ ದಶಾವತಾರದ ಚಿತ್ರಣಗಳನ್ನು ಒಳಗೊಂಡಿರುವುದು ವಿಶೇಷ. ಕಲಾಕೃತಿಯು ವಿಗ್ರಹದಂತೆ ಕಾಣುವ ತ್ರಿಮಿತೀಯ ವಿನ್ಯಾಸವನ್ನು ಹೊಂದಿದೆ.

ram idol 2

ಡಿಸೆಂಬರ್ 11ರಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂ ದೃಢೀಕರಣ ಪತ್ರವನ್ನು ಸ್ವೀಕರಿಸಿದ ನಂತರ, ಜಯಶ್ರೀ ಫಣೀಶ್ ಅವರ ಮನೆಗೆ ಕಲಾಕೃತಿಯನ್ನು ವೀಕ್ಷಿಸಲು ನಿರಂತರವಾಗಿ ಭಕ್ತರು ಮತ್ತು ಕಲಾಭಿಮಾನಿಗಳ ದಂಡೇ ಹರಿದು ಬಂದಿದೆ. ಕಲಾಕೃತಿ ಸ್ವೀಕಾರವಾದ ಸುದ್ದಿ ತಿಳಿದ ಕೂಡಲೇ, ರಾಜಾಜಿನಗರದಲ್ಲಿರುವ ಅವರ ಮನೆ ಭಕ್ತರ ದರ್ಶನ ಕೇಂದ್ರವಾಯಿತು. ಕೆಲವರು ಕೇವಲ ದರ್ಶನಕ್ಕಾಗಿ ಬಂದರೆ, ಇನ್ನು ಕೆಲವರು ಭಜನೆ, ನೃತ್ಯ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

50 ವರ್ಷದ ಜಯಶ್ರೀ ಫಣೀಶ್ ಅವರು ತಂಜಾವೂರು ವರ್ಣಚಿತ್ರಗಳಲ್ಲಿ ಪರಿಣತಿ ಹೊಂದಿದ್ದು, ಕಳೆದ ಹತ್ತು ವರ್ಷಗಳಲ್ಲಿ ತಮ್ಮ 10 ಕಲಾಕೃತಿಗಳನ್ನು ವಿವಿಧ ದೇವಾಲಯಗಳಿಗೆ ದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ದೊಡ್ಡಮಗ್ಗೆ ಗ್ರಾಮದ ದೇವಾಲಯವೊಂದರಲ್ಲಿ ವರ್ಣಚಿತ್ರವನ್ನು ಸಮರ್ಪಿಸುವ ಸಂದರ್ಭದಲ್ಲಿ, ಅಯೋಧ್ಯೆಯ ಕೇಂದ್ರ ದೇವತೆಯಾದ ಬಾಲರಾಮನ ಕಲಾಕೃತಿಯನ್ನು ನಿರ್ಮಿಸುವ ಆಸೆಯನ್ನು ಅವರು ಮೊದಲ ಬಾರಿಗೆ ವ್ಯಕ್ತಪಡಿಸಿದ್ದರು. ಈ ಆಲೋಚನೆಯೇ ಮುಂದಾಗಿ, ಬೆಂಗಳೂರಿನ ಉದ್ಯಮಿ ಜಿ.ಕೆ. ಪ್ರಮೋದ್ ಸೇರಿದಂತೆ ಕೆಲವರು ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾದರು.

ram idol 3

ಈ ಮಹತ್ವಾಕಾಂಕ್ಷಿ ಕಲಾಕೃತಿಯನ್ನು ಪೂರ್ಣಗೊಳಿಸಲು ಜಯಶ್ರೀ ಅವರಿಗೆ ಒಂಬತ್ತು ತಿಂಗಳುಗಳ ಕಾಲ, ಅಂದಾಜು 2,800 ಗಂಟೆಗಳ ಶ್ರಮ ಬೇಕಾಯಿತು. ಥರ್ಮೋಕೋಲ್‌ ಮೂಲ ರಚನೆಯಿಂದ ಆರಂಭಿಸಿ, ಜೇಡಿಮಣ್ಣಿನ ಪದರ ಹಾಕಿ, ನಂತರ ಚಿನ್ನದ ಎಲೆಯ ಹಾಳೆಗಳಿಂದ ಅಂತಿಮ ಸ್ಪರ್ಶ ನೀಡಲಾಗಿದೆ. ಇದು ಜಯಶ್ರೀ ಅವರ ವಿಗ್ರಹದಂತಿರುವ ಕಲಾಕೃತಿಯ ಮೊದಲ ಪ್ರಯತ್ನವಾಗಿದ್ದು, ಅದರಲ್ಲೂ ರಾಮನ ಮುಖವನ್ನು ಕೆತ್ತುವುದು ಅತ್ಯಂತ ಸವಾಲಿನ ಭಾಗವಾಗಿತ್ತು. ಅದಕ್ಕೆ ಐದು ದಿನಗಳ ಕಾಲ ತೀವ್ರ ಪರಿಶ್ರಮ ಬೇಕಾಯಿತು.

ಈ ಕೆಲಸದಲ್ಲಿ ಜಯಶ್ರೀ ಅವರ ಪತಿ, ಶಸ್ತ್ರ ಚಿಕಿತ್ಸಕ ಡಾ. ಫಣೀಷ್ ಎಂ.ಎಸ್. ಅವರೂ ಮಹತ್ವದ ಪಾತ್ರ‌ ವಹಿಸಿದ್ದಾರೆ. ಮಾನವ ಅಂಗರಚನಾ ಜ್ಞಾನವನ್ನು ಬಳಸಿಕೊಂಡು, ತೋಳು, ಮುಂದೋಳು, ಕಾಲುಗಳ ಅನುಪಾತ, ಕೀಲುಗಳ ಸ್ಥಾನ ಮತ್ತು ಪಾದಗಳ ಕೆತ್ತನೆಗೆ ಅವರು ಮಾರ್ಗದರ್ಶನ ನೀಡಿದರು. ಡಾ. ಫಣೀಷ ಅವರ ಪ್ರಕಾರ, ಕಳೆದ 50 ದಿನಗಳಲ್ಲಿ ಸುಮಾರು 25,000ಕ್ಕೂ ಹೆಚ್ಚು ಜನರು ಅವರ ಮನೆಗೆ ಭೇಟಿ ನೀಡಿದ್ದಾರೆ.

ಹರೀಶ್‌ ಕೇರ

View all posts by this author