ಬೆಂಗಳೂರು, ಮಾ. 26: ರಾಜ್ಯದಲ್ಲಿನ ಪಾಲಕರಿಗೆ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಅಗತ್ಯವಾಗಿರುವ ವಯಸ್ಸಿನ ಬಗ್ಗೆ ಮೂಡಿರುವ ಗೊಂದಲವನ್ನು ನಿವಾರಿಸಿದೆ. 6 ವರ್ಷ ತುಂಬಲು ಒಂದೆರಡು ತಿಂಗಳು ಬಾಕಿ ಇರುವ ಮಕ್ಕಳ 1 ವರ್ಷ ನಷ್ಟವಾಗಲಿದೆ ಎನ್ನುವ ಚಿಂತೆ ಮಾಡಬೇಕಾಗಿಲ್ಲ. ಹೌದು, ಶಾಲಾ ದಾಖಲಾತಿ ವಯಸ್ಸಿನ ಮಿತಿಯ ವಿಚಾರವಾಗಿ ಗೊಂದಲದಲ್ಲಿದ್ದ ಪಾಲಕರಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ರಿಲೀಫ್ ಮೂಡಿದೆ. 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಈ ವರ್ಷವೂ ಸಡಿಲಿಕೆ ಮಾಡುವುದಾಗಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಘೋಷಿಸಿದರು.
ಜೂನ್ 1ಕ್ಕೆ ಮಗುವಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮಕ್ಕೆ ಈ ಬಾರಿ 60 ದಿನಗಳ ಅಂದರೆ 2 ತಿಂಗಳ ರಿಯಾಯಿತಿ ನೀಡಲಾಗಿದೆ. ಇದರಿಂದ ನಿಗದಿತ ದಿನಾಂಕಕ್ಕೆ ಎರಡು ತಿಂಗಳು ಬಾಕಿ ಇರುವ ಮಕ್ಕಳಿಗೂ 1ನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ.
ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಸಚಿವರು, "ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅನ್ವಯ, ಪೋಷಕರ ಹಿತದೃಷ್ಟಿಯಿಂದ 2026-27ನೇ ಸಾಲಿಗೆ ಈ ವಿನಾಯಿತಿ ಅನ್ವಯವಾಗಲಿದೆ" ಎಂದು ತಿಳಿಸಿದರು.
ಕನ್ನಡ ಮಾಧ್ಯಮದ ಯಾವುದೇ ಶಾಲೆಯನ್ನು ಮುಚ್ಚಲ್ಲ: ಮಧು ಬಂಗಾರಪ್ಪ
ಜತೆಗೆ ಶಾಲಾ ದಾಖಲಾತಿಗಾಗಿ ಬಳಸುವ ಸಾಫ್ಟ್‌ವೇರ್‌ನಲ್ಲಿ ಈ ಬದಲಾವಣೆಯನ್ನು ತಕ್ಷಣವೇ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ವರ್ಷಗಳಿಂದ ವಯಸ್ಸಿನ ಮಿತಿಯ ವಿಚಾರವಾಗಿ ಪಾಲಕರಲ್ಲಿ ಭಾರಿ ಆತಂಕ ಮನೆ ಮಾಡಿದೆ. ಹಲವು ಮಕ್ಕಳ ವಯಸ್ಸು ಜೂನ್‌ಗೆ ಕೇವಲ ಕೆಲವು ದಿನಗಳ ಅಂತರದಲ್ಲಿ 6 ವರ್ಷಕ್ಕೆ ಕಡಿಮೆ ಇರುತ್ತದೆ. ಇದರಿಂದ ಮಕ್ಕಳ ಒಂದು ವರ್ಷ ವ್ಯರ್ಥವಾಗುತ್ತದೆ ಎಂಬ ದೂರುಗಳು ಕೇಳಿಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಯಸ್ಸಿನ ಮಿರಿಯನ್ನು ಮತ್ತೊಮ್ಮೆ ಸಡಿಲಿಸಿದೆ.
ಕಳೆದ ವರ್ಷವೂ ಸಡಿಲಿಕೆ
ಕಳೆದ ವರ್ಷವೂ 1ನೇ ತರಗತಿಗೆ ಸೇರುವ ಮಕ್ಕಳ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿತ್ತು. 2025-26ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 1ನೇ ತರಗತಿಗೆ ದಾಖಲು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು. ವಯೋಮಿತಿ ಸಡಿಲಿಕೆ ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದ್ದು, ಮುಂದಿನ ವರ್ಷದಿಂದ ಈ ಮೊದಲಿನಂತೆ ಜೂನ್ ಒಂದನೇ ತಾರೀಕಿಗೆ 6 ವರ್ಷಗಳು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ 1ನೇ ತರಗತಿಗೆ ದಾಖಲಿಸಿಕೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಣ ನಿರ್ದೇಶಕರು ಆದೇಶ ಹೊರಡಿಸಿದ್ದರು.
ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 1ನೇ ತಾರೀಕಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ 1ನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಲಾಗಿತ್ತು. ಈ ಬಾರಿಯೂ ಪಾಲಕರು ಮನವಿ ಮಾಡಿದ್ದರಿಂದ ಸರ್ಕಾರ ಮತ್ತೊಮ್ಮೆ 60 ದಿನಗಳಿಗೆ ವಯೋಮಿತಿ ಸಡಿಲಿಸಿದೆ.