ಬೆಂಗಳೂರು, ಸೆ. 3: ಜನಾಕ್ರೋಶಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು, ಪಾರ್ಕ್‌ನ ಶೇಕಡಾ 5ರಷ್ಟು ಜಾಗ ಬಳಸುವ ಬಿಲ್ ವಾಪಸ್ ಪಡೆದಿದೆ (Karnataka Parks Bill Row). ಬಿಲ್‌ಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಾಗಿದೆ ಎಂದು ಸರ್ಕಾರದ ಮೂಲಗಳು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ 2026 ವಿಧಾನಸಭೆಯಲ್ಲಿಇತ್ತೀಚೆಗೆ ಅಂಗೀಕಾರಗೊಂಡಿತ್ತು. ಬಿಜೆಪಿ ಸದಸ್ಯರ ಗದ್ದಲದ ನಡುವೆಯೂ ಡಿಸಿಎಂ ಡಾ.ಜಿ. ಪರಮೇಶ್ವರ್ ವಿಧೇಯಕ ಮಂಡಿಸಿದ್ದರು. ಚರ್ಚೆ ಇಲ್ಲದೆ ವಿಧೇಯಕ ಅಂಗೀಕಾರಗೊಂಡಿತ್ತು. ಅದಾದ ಬಳಿಕ ಈ ಬಗ್ಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ಸರ್ಕಾರ ಮಣಿದಿದೆ.
ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, "ಸಾರ್ವಜನಿಕರ ಹಿತಾಸಕ್ತಿ ಮತ್ತು ಭಾವನೆಗಳನ್ನು ಗೌರವಿಸಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆಯಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಪಾರ್ಕ್ ಬಿಲ್ ಬಗ್ಗೆ ಡಾ. ಜಿ. ಪರಮೇಶ್ವರ್ ಮಾಹಿತಿ:
ವಿಧೇಯಕದಲ್ಲಿ ಏನಿತ್ತು?
ಸರ್ಕಾರದ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಕಂಪನಿಗಳು ಅಥವಾ ಸಾರ್ವಜನಿಕ ಉಪಯುಕ್ತತೆಯ ಯೋಜನೆಗಳಿಗಾಗಿ ಸ್ಥಳೀಯ ಪ್ರಾಧಿಕಾರಗಳ ಪರವಾಗಿ ಮಾತ್ರ ಉದ್ಯಾನವನದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇಕಡಾ 5ರಷ್ಟು ಭೂಮಿಯನ್ನು ಮಾರಾಟ, ಗೇಣಿ (ಲೀಸ್), ಕೊಡುಗೆ (ಗಿಫ್ಟ್), ವಿನಿಮಯ, ಅಡಮಾನ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿಯನ್ನು ನೀಡುವ ವಿಧೇಯಕ ಇದಾಗಿತ್ತು.
ಸೆ.21 ರಿಂದ 3 ದಿನಗಳ ವಿಶೇಷ ಅಧಿವೇಶನಕ್ಕೆ ರಾಜ್ಯ ಸರ್ಕಾರದಿಂದ ಸಿದ್ಧತೆ
ಅಂದರೆ ಈ ಮಸೂದೆಯ ಅನ್ವಯ ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು ಅಥವಾ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಉದ್ಯಾನವನ ಅಥವಾ ಪಾರ್ಕ್‌ನ ಒಟ್ಟು ವಿಸ್ತೀರ್ಣದ ಶೇಕಡಾ 5ರಷ್ಟು ಜಾಗವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮೂಲಸೌಕರ್ಯ ಅಥವಾ ಸಾರ್ವಜನಿಕ ಉಪಯೋಗಿ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿತ್ತು. ಈ ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ ಅಥವಾ ಅಡಮಾನದ ಮೂಲಕ ಹಸ್ತಾಂತರಿಸಬಹುದಾಗಿತ್ತು.
ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯಿದೆ-1975ಕ್ಕೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರ ನಗರದ ಹಸಿರು ಪ್ರದೇಶವನ್ನು ಕುಗ್ಗಿಸಲು ಮುಂದಾಗಿದೆ ಎಂದು ಸಾರ್ವಜನಿಕರು, ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯ ಸರ್ಕಾರ ಅಂಗೀಕರಿಸಿರುವ ವಿಧೇಯಕ ವಿರೋಧಿಸಿ ಪರಿಸರವಾದಿ ಯಲ್ಲಪ್ಪರೆಡ್ಡಿ ಮತ್ತು ಸಂಸದ ತೇಜಸ್ವಿಸೂರ್ಯ ನೇತೃತ್ವದಲ್ಲಿ ಬೆಂಗಳೂರಿನ ಲಾಲ್ಬಾಗ್ನ ಪಶ್ಚಿಮ ದ್ವಾರದಿಂದ ನಡಿಗೆ ಚಳವಳಿ ನಡೆಸಲಾಗಿತ್ತು. ಪಾರ್ಕ್ ಜಾಗವನ್ನು ಅನ್ಯ ಉದ್ದೇಶಗಳಿಗಾಗಿ ನೀಡಲು ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ಪರಿಸರ ಹೋರಾಟಗಾರರು, ಕನ್ನಡಪರ ಹೋರಾಟಗಾರರು ನಡಿಗೆ ಚಳವಳಿಗೆ ಸಾಥ್ ನೀಡಿದ್ದರು.
2047ರ ವೇಳೆಗೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ; ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು ಉಳಿಸಿ ಸಮಿತಿಯಿಂದಲೂ ವಿರೋಧ
ಬೆಂಗಳೂರು ನಗರದ ಮೂಲಸೌಕರ್ಯ ಯೋಜನೆಗಳಿಗಾಗಿ ಉದ್ಯಾನವನಗಳ ಒಟ್ಟು ಭೂಪ್ರದೇಶದ ಶೇಕಡಾ 5ರಷ್ಟು ಭಾಗವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ತಿದ್ದುಪಡಿ ಮಸೂದೆಗೆ ಬೆಂಗಳೂರು ಉಳಿಸಿ ಸಮಿತಿ ಕೂಡ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಉಳಿಸಿ ಸಮಿತಿ ನಿರ್ದೇಶಕ ಡಾ.ಜಿ. ಶಶಿಕುಮಾರ್, ʼʼಸರ್ಕಾರದ ಈ ಕ್ರಮ ಅಂಗೀಕಾರಗೊಂಡರೆ, ಅದು ಕರ್ನಾಟಕ ಸರಕಾರಿ ಉದ್ಯಾನವನಗಳ ಕಾಯ್ದೆ, 1975ರ ಸೆಕ್ಷನ್ 4ನ್ನು ದುರ್ಬಲಗೊಳಿಸುವ ಅಪಾಯವಿದೆ. ಸಾರ್ವಜನಿಕ ಉದ್ಯಾನವನ ಸಂರಕ್ಷಿಸುವುದು ಸರಕಾರದ ಕರ್ತವ್ಯವಾಗಿದ್ದು, ಉದ್ಯಾನವನಗಳ ಭೂಮಿಯನ್ನು ಮಾರಾಟ, ಗುತ್ತಿಗೆ, ಪರಭಾರೆ, ವಿನಿಮಯ ಅಥವಾ ಅಡಮಾನ ಮಾಡುವಂತಿಲ್ಲ. ಸಾರ್ವಜನಿಕ ಮೂಲಸೌಕರ್ಯ ಎಂಬ ನೆಪದಲ್ಲಿ ನಗರದ ಅಮೂಲ್ಯ ಹಾಗೂ ಅಪರೂಪದ ಹಸಿರು ಪ್ರದೇಶಗಳನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವುದು ಮುಂದಿನ ದಿನಗಳಲ್ಲಿ ಉದ್ಯಾನವನಗಳ ಒತ್ತುವರಿಗೆ ದಾರಿ ಮಾಡಿಕೊಡಬಹುದುʼʼ ಎಂದು ಆತಂಕ ವ್ಯಕ್ತಪಡಿಸಿದ್ದರು.
ʼʼವಿಶೇಷವಾಗಿ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಂತಹ ಐತಿಹಾಸಿಕ ಹಸಿರು ಪ್ರದೇಶ ಗಳನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಅಥವಾ ಮೂಲಸೌಕರ್ಯ ಯೋಜನೆಗಳಿಗೆ ಬಲಿಯಾಗಲು ಬಿಡಬಾರದುʼʼ ಎಂದಿದ್ದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.