ಬೆಂಗಳೂರು, ಅ. 17: ಇನ್ನೂ ನಿಮ್ಮ ಪಡಿತರ ಚೀಟಿಯ ಇ-ಕೆವೈಸಿ ಆಗಿಲ್ಲವೆ? ಚಿಂತಿಸಬೇಡಿ. ಇ-ಕೆವೈಸಿ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದುವರೆಗೆ ಇ-ಕೆವೈಸಿಗೆ ಸೆಪ್ಟೆಂಬರ್ 30 ಕೊನೆಯ ದಿನವಾಗಿತ್ತು. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ತೀವ್ರ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿಗೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 30ರವರೆಗೆ ಇದ್ದ ಕೊನೆ ದಿನಾಂಕವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳಿದೆ. ಇದರ ಜತೆಗೆ ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿ, ರಾಜ್ಯದ ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿತ್ತು. ಆದರೆ ಸರ್ವರ್, ತಾಂತ್ರಿಕ ಸಮಸ್ಯೆಯಿಂದ ಹಲವೆಡೆ ಇ-ಕೆವೈಸಿ ಪೂರ್ಣಗೊಂಡಿದರಿಲ್ಲ. ಇದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಅಕ್ಟೋಬರ್ 20ರವರೆಗೆ ಅವಧಿ ವಿಸ್ತರಣೆ
ಸರ್ವರ್ ಸಮಸ್ಯೆ ಬಗ್ಗೆ ನ್ಯಾಯಬೆಲೆ ಅಂಗಡಿಯವರು ಸರ್ಕಾರದ ಗಮನ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಿ ಡೆಡ್ಲೈನ್ ವಿಸ್ತರಿಸಿದ್ದು, ಸಾರ್ವಜನಿಕರು ತಕ್ಕ ಮಟ್ಟಿನ ರಿಲೀಫ್ ಸಿಕ್ಕಿದೆ.
ಸಚಿವ ರಿಜ್ವಾನ್ ಅರ್ಷದ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗಿರೋ ಸರ್ವರ್ ಸಮಸ್ಯೆಗೆ ಜನಸಾಮಾನ್ಯರು ಕಂಗಾಲಾಗಬೇಕಿಲ್ಲ. ಇ-ಕೆವೈಸಿ ಗಡುವನ್ನ ಅಕ್ಟೋಬರ್ 20ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ
ಇನ್ನು ನ್ಯಾಯಬೆಲೆ ಅಂಗಡಿಗಳ ಸಮಯವೂ ಬದಲಾಗಲಿದೆ. ಅಕ್ಟೋಬರ್ 1ರಿಂದ ಜಾರಿಯಾಗುವಂತೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಇನ್ಮುಂದೆ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಇ-ಕೆವೈಸಿಗೂ ಅನುಕೂಲವಾಗಲಿದೆ.
ಇ ಕೆವೈಸಿ ಮಾಡಿಸುವುದು ಹೇಗೆ?
ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ.ಕುಟುಂಬದ ಎಲ್ಲ ಸದಸ್ಯರು ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಸಂಖ್ಯೆಯನ್ನು ತೆಗೆದುಕೊಂಡು ಹೋಗಬೇಕು. ಅಲ್ಲಿನ ವಿತರಕರು ನಿಮ್ಮ ಬಯೋಮೆಟ್ರಿಕ್ (ಬೆರಳು ಗುರುತು ಅಥವಾ ಕಣ್ಣಿನ ಸ್ಕ್ಯಾನ್) ಪಡೆದು ಇ-ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ಪೂರ್ಣಗೊಳಿಸಿಕೊಡುತ್ತಾರೆ. ಜತೆಗೆ ಸಾರ್ವಜನಿಕರು ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಪ್ರಕ್ರಿಯೆಯನ್ನು ಸುಲಭಗೊಳಿಸಲು ವಿಶೇಷ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ. ವಾರದೊಳಗೆ ಮೊಬೈಲ್ ಆ್ಯಪ್ ಬಿಡುಗಡೆಯಾಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.