ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೃಹಲಕ್ಷ್ಮಿ ಯೋಜನೆ ದುರುಪಯೋಗ ತಡೆಯಲು ದಿಟ್ಟ ಹೆಜ್ಜೆ ಇಟ್ಟ ಸರ್ಕಾರ; ಇನ್ಮುಂದೆ ಜೀವಿತ ಪ್ರಮಾಣ ಪತ್ರ ಕಡ್ಡಾಯ

Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಹೊಸ ಸೂಚನೆ ಸದ್ಯದಲ್ಲೇ ಹೊರ ಬೀಳಲಿದೆ. ಯೋಜನೆಯ ದುರ್ಬಳಕೆ ತಡೆಯಲು ಸರ್ಕಾರ ಮುಖ್ಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇನ್ನುಮುಂದೆ ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಫೆ. 7: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆ ಎನಿಸಿಕೊಂಡಿರುವ ಗೃಹಲಕ್ಷ್ಮಿ (Gruhalakshmi Scheme) ಫಲಾನುಭವಿಗಳಿಗೆ ಸಂಬಂಧಿಸಿದಂತೆ ಹೊಸ ಸೂಚನೆ ಸದ್ಯದಲ್ಲೇ ಹೊರ ಬೀಳಲಿದೆ. ಯೋಜನೆಯ ದುರ್ಬಳಕೆ ತಡೆಯಲು ಸರ್ಕಾರ ಮುಖ್ಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇನ್ನುಮುಂದೆ ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ (Life Certificate) ಸಲ್ಲಿಸುವುದು ಕಡ್ಡಾಯವಾಗಲಿದೆ. ಮರಣ ಹೊಂದಿರುವ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿರುವುದನ್ನು ತಪ್ಪಿಸಲು ಜೀವಿತ ಪ್ರಮಾಣ ಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಬಗ್ಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದ್ದರು. ಅಲ್ಲದೆ ಈ ಬಗ್ಗೆ ಲಿಖಿತ ಮನವಿಯನ್ನೂ ಸಲ್ಲಿಸಿದ್ದರು.

ದಿನೇಶ್ ಗೂಳಿಗೌಡ ಅವರ ಮನವಿ ಮೇರೆಗೆ ಸಿದ್ದರಾಮಯ್ಯ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ಸಲ್ಲಿಸುವಂತೆ ಗೃಹಲಕ್ಷ್ಮಿ ಫಲಾನುಭವಿಗಳೂ ಜೀವಿತ ಪ್ರಮಾಣ ಪತ್ರ ಹಾಜರುಪಡಿಸಬೇಕಾಗುತ್ತದೆ.

ರಾಜ್ಯದಲ್ಲಿ ಸುಮಾರು 1.24 ಕೋಟಿಗೂ ಅಧಿಕ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ. ಯೋಜನೆ ಜಾರಿದಾಗಾಗಿನಿಂದ ಸರ್ಕಾರ ಈವರೆಗೆ ಫಲಾನುಭವಿಗಳಿಗೆ ಸುಮಾರು 57,300 ಕೋಟಿ ರುಪಾಯಿ ವಿತರಿಸಿದೆ. ಅದಾಗ್ಯೂ ಈ ಯೋಜನೆಯನ್ನು ದುರುಪಯೋಗಪಡಿಸಲಾಗುತ್ತಿದೆ ಎನ್ನುವ ಆರೋಪ ಪದೇ ಪದೆ ಕೇಳಿ ಬರುತ್ತಿದೆ. ಮೃತ ಮಹಿಳೆಯರ ಹೆಸರಿನಲ್ಲಿ ಈಗಲೂ ಹಣ ಪಡೆದುಕೊಳ್ಳುವವರಿದ್ದಾರೆ ಎನ್ನುವ ಬಗ್ಗೆ ದೂರುಗಳಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟುವಾಗುತ್ತಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ

ಪತ್ರ ಬರೆದಿದ್ದ ದಿನೇಶ್ ಗೂಳಿಗೌಡ

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ದಿನೇಶ್ ಗೂಳಿಗೌಡ, ʼʼಕುಟುಂಬದ ಜೀವನ ನಿರ್ವಹಣೆಗೆ ಆಸರೆಯಾಗಿರುವ ಈ ಯೋಜನೆಯ ಹಣವು ಮರಣ ಹೊಂದಿರುವ ಫಲಾನುಭವಿಗಳಿಗೆ ಪಾವತಿಯಾಗುವುದನ್ನು ತಡೆಗಟ್ಟುವುದು ಅಗತ್ಯ. ಇದರಿಂದ ಉಳಿತಾಯವಾಗುವ ಮೊತ್ತವನ್ನು ಇತರ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಅನುಕೂಲವಾಗುತ್ತದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕುʼʼ ಎಂದು ಗಮನ ಸೆಳೆದಿದ್ದರು. ಸದ್ಯದಲ್ಲೇ ಈ ಬಗ್ಗೆ ಅಧಿಸೂಚನೆ ಹೊರ ಬೀಳುವ ಸಾಧ್ಯತೆ ಇದೆ.

ಸಹಾಯವಾಣಿ

ಗೃಹಲಕ್ಷ್ಮಿ ಯೋಜನೆಯ ಕುಂದು ಕೊರತೆ ನಿವಾರಣೆಗೆ ಸರ್ಕಾರ ಸಹಾಯವಾಣಿ ತೆರೆದಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘181’ ಸಂಖ್ಯೆಯ ಸಹಾಯವಾಣಿಯನ್ನು ತೆರೆದಿದ್ದು, ಇದರಡಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿಯನ್ನೂ ತರಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author