ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗೃಹ ಲಕ್ಷ್ಮಿ ಯೋಜನೆಯ ದುರುಪಯೋಗವಾಗಿದ್ದು ಹೇಗೆ? ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಪಷ್ಟನೆಯಲ್ಲಿ ಏನಿದೆ?

Gruha Lakshmi Scheme: ಗೃಹಲಕ್ಷ್ಮಿ ಯೋಜನೆಗಳಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹಲವು ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಾಗಿ, ಒಂದೇ ಫಲಾನುಭವಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದಾಗಿ, ಬ್ಯಾಂಕ್ ಖಾತೆ ಹೊಂದಿರದ ಫಲಾನುಭವಿಗಳಿಗೂ ಧನಸಹಾಯ ಪಾವತಿಯಾಗುತ್ತಿರುವ ಬಗ್ಗೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 25: ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಗಳಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಅರ್ಹ ಮಹಿಳೆಯರ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ ಪಾವತಿಸುವ ಈ ಯೋಜನೆಯನ್ನು ದುರುಪಯೋಗಪಡಿಸುತ್ತಿರುವ ಬಗ್ಗೆ ಸಿಎಜಿ ವರದಿಯಲ್ಲೂ ಉಲ್ಲೇಖಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇಲಾಖೆಯು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮೂರು ತಾಂತ್ರಿಕ ಅಂಶಗಳನ್ನು ಪತ್ತೆ ಹಚ್ಚಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಅತ್ಯಂತ ಮಹತ್ವಕಾಂಕ್ಷಿ ಯೋಜನೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿಗೆ (ಮಹಿಳೆ/ ಲಿಂಗತ್ಯ ಅಲ್ಪಸಂಖ್ಯಾತರಿಗೆ) ಪ್ರತಿ ತಿಂಗಳು 2,000 ರುಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು 2023ರಲ್ಲಿ ಜಾರಿಗೊಳಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದು, ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅಂತಹ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಿಎಜಿ ಲೆಕ್ಕ ತಪಾಸಣೆ ವರದಿಯಲ್ಲಿ ಹಲವು ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಾಗಿ, ಒಂದೇ ಫಲಾನುಭವಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದಾಗಿ, ಬ್ಯಾಂಕ್ ಖಾತೆ ಹೊಂದಿರದ ಫಲಾನುಭವಿಗಳಿಗೂ ಧನಸಹಾಯ ಪಾವತಿಯಾಗುತ್ತಿರುವುದನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗೃಹ ಲಕ್ಷ್ಮೀ ಯೋಜನೆಗೆ ಭರ್ಜರಿ ಅನುದಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪತ್ತೆ ಹಚ್ಚಿರುವ ಮೂರು ಅಂಶಗಳು

ಒಂದೇ ಬ್ಯಾಂಕ್​​ ಖಾತೆ ಸಂಖ್ಯೆಯನ್ನು ಹೊಂದಿರುವ ಬಹು ಫಲಾನುಭವಿಗಳು: ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ ಬಹು ಫಲಾನುಭವಿಗಳು ಎಬಿಪಿಎಸ್​​ ವ್ಯವಸ್ಥೆಯಲ್ಲಿ ಆಧಾರ್ ಸಂಖ್ಯೆಯನ್ನು ಹಣಕಾಸಿನ ವಿಳಾಸವಾಗಿ ಬಳಸುತ್ತಾರೆ. ಒಂದೇ ಬ್ಯಾಂಕ್ ಖಾತೆ ಸಂಖ್ಯೆಯಡಿ ಬಹು ಫಲಾನುಭವಿಗಳು ಕಂಡುಬರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೇಯದು ಜಂಟಿ ಬ್ಯಾಂಕ್ ಖಾತೆಯಿದ್ದಲ್ಲಿ ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು. ಎರಡನೆಯದು ಫಲಾನುಭವಿಯು ಖಾತೆ ಹೊಂದಿರುವ ಬ್ಯಾಂಕ್‌ನ ತಾಂತ್ರಿಕ ದೋಷದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದಲ್ಲಿ ಹಂಚಿಕೆಯಾಗಿರಬಹುದು.

ಒಂದಕ್ಕಿಂತ ಹೆಚ್ಚು ಬ್ಯಾಂಕ್​ ಖಾತೆಗಳನ್ನ ಹೊಂದಿರುವ ಫಲಾನುಭವಿಗಳು: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಬೇಕು. ಫಲಾನುಭವಿ ಸರ್ಕಾರಿ ಸೌಲಭ್ಯ ಪಡೆಯಲು ತಾವು ಬಯಸುವ ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು. ಅಗತ್ಯವಿದ್ದಲ್ಲಿ ಲಿಖಿತ ಒಪ್ಪಿಗೆಯ ಮೂಲಕ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಬಹುದು. NPCI Mapperನಲ್ಲಿ ಈ ಬದಲಾವಣೆ ನವೀಕರಿಸಿದ ನಂತರ ಸರ್ಕಾರಿ ಸೌಲಭ್ಯ ಹೊಸದಾಗಿ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬ್ಯಾಂಕ್ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಅನುಸರಿಸಿ ಈ ಬದಲಾವಣೆ ಮಾಡುತ್ತದೆ. ಇದರಲ್ಲಿ ಸರ್ಕಾರ ಅಥವಾ ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಒಂದೇ ಫಲಾನುಭವಿಯ ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳ ಹಣ ಪಾವತಿ ಮಾಡುವ ಅವಕಾಶವಿದೆ. ಆದರೆ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ.

ಬ್ಯಾಂಕ್​ ಖಾತೆ ವಿವರಗಳಿಲ್ಲದ ಫಲಾನುಭವಿಗಳಿಗೆ ಪಾವತಿ: ABPS ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದ ಭಾಗವಾಗಿ ಲಭ್ಯವಾಗಬೇಕು. ಆದರೆ ಕೆಲವೊಮ್ಮೆ ಫಲಾನುಭವಿಗಳ ಬ್ಯಾಂಕಿನ ತಾಂತ್ರಿಕ ಸಮಸ್ಯೆಯಿಂದ ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ ಕಳುಹಿಸಬಹುದು. ಈ ಕುರಿತು ಪರಿಶೀಲನೆಗಳನ್ನು ನಡೆಸಿದಾಗ, ನಂತರದ ತಿಂಗಳುಗಳಲ್ಲಿ ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯಾ ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡುಬಂದಿದೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author