ಬೆಳಗಾವಿ, ಡಿ.10 : ಕರ್ನಾಟಕ ರಾಜ್ಯ ಸರ್ಕಾರವು (Karnataka govt) ಮಹಿಳೆಯರಿಗೆ ನೀಡುವ ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಹಣವನ್ನು ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಕೊಡುತ್ತೇವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraja rayareddy) ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ನಾವು ಆರ್ಥಿಕವಾಗಿ ಗಟ್ಟಿಯಾಗಿ ಇದ್ದೇವೆ. ಜಿಎಸ್‌ಟಿ ಕಲೆಕ್ಷನ್ ಆದರೆ ಕೇಂದ್ರದವರು ಅರ್ಧ ಹಣ ಕೊಡಬೇಕು. ಅವರು ಕೊಡುವುದು 1 ತಿಂಗಳು, ಎರಡು ತಿಂಗಳು ತಡವಾಗುತ್ತೆ. ಹೀಗಾಗಿ ಹಣ ಹೊಂದಿಸುವುದು ತಡವಾಗುತ್ತದೆ. ಹೀಗಾಗಿ ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮೀ ಹಣ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
54,000 ಕೋಟಿ ರೂ. ಪಾವತಿ
‘ಗೃಹಲಕ್ಷ್ಮೀ ಯೋಜನೆಯಡಿ ಈವರೆಗೆ ರಾಜ್ಯದ 1.24 ಕೋಟಿ ಮಹಿಳೆಯರಿಗೆ ತಲಾ 2000 ರೂ.ನಂತೆ 23 ಕಂತುಗಳಲ್ಲಿ 54,000 ಕೋಟಿ ರು. ಪಾವತಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಹೇಳಿದರು. ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಪ್ರಶ್ನೆಗೆ ಉತ್ತರಿಸಿದ ಸಚಿವೆ, ‘ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಯನ್ನು ಮಾದರಿಯಾಗಿ ಸ್ವೀಕರಿಸಿ ಇತರೆ ರಾಜ್ಯಗಳು ಜಾರಿಗೊಳಿಸಿವೆ. ಯೋಜನೆ ಆರಂಭದಿಂದ ಕಳೆದ ಆಗಸ್ಟ್‌ವರೆಗೆ 1.24 ಕೋಟಿ ರು. ಮಹಿಳಾ ಫಲಾನುಭವಿಗಳಿಗೆ ತಲಾ 2 ಸಾವಿರ ರು.ನಂತೆ 54 ಸಾವಿರ ಕೋಟಿ ರು. ಪಾವತಿಸಲಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಿಂದ ಬದುಕಿಗೆ ಹೊಸ ಚೈತನ್ಯ; ಸಿಎಂ ಎದುರು ಗೃಹಲಕ್ಷ್ಮಿಯರ ಪ್ರಶಂಸೆ
ಸಹಕಾರ ಸಂಘ ಸ್ಥಾಪನೆ
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 'ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘ'ವನ್ನು ಸ್ಥಾಪಿಸಿದೆ. ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.28ರಂದು ಉದ್ಘಾಟಿಸಿದರು. ಸಂಘಕ್ಕೆ ಕಾನೂನಾತ್ಮಕವಾಗಿ ಚುನಾವಣೆ ನಡೆಸಿ, ಪದಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಸಿಲ್ಲ. ಪರಿಣಾಮ ಈಗ ಸದಸ್ಯತ್ವ ಪಡೆದವರಿಗೂ ಸಹ ಯಾವುದೇ ಸೌಲಭ್ಯ ದಕ್ಕದಂತಾಗಿದೆ.
ಸಂಘದ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿ ರೂಪಿಸಿಲ್ಲ. ರಾಜ್ಯದಲ್ಲಿ 1.24 ಕೋಟಿ ಮಂದಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದು, ಇವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲು ಈ ಸಂಘ ಸ್ಥಾಪಿಸಲಾಗಿದೆ. ಸಂಘದಲ್ಲಿ ಸದಸ್ಯರಾದವರಿಗೆ ಮಾತ್ರ ಸಾಲ ಸೌಲಭ್ಯಗಳು ದೊರೆಯುತ್ತಿವೆ. ಈಗಾಗಲೇ 2 ಸಾವಿರ ಮಂದಿ ಗೃಹಲಕ್ಷ್ಮಿ ಫಲಾನುಭವಿಗಳಿಂದ ತಲಾ 1,250 ರೂ. ಶುಲ್ಕ ಸಂಗ್ರಹಿಸಿ, ಸದಸ್ಯತ್ವ ನೀಡಲಾಗಿದೆ. ಇದರಿಂದ ಸುಮಾರು 25 ಲಕ್ಷ ರೂ. ಸಂಗ್ರಹವಾಗಿದೆ.