ಕೊಪ್ಪಳ, ಫೆ.2: ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Minister Lakshmi Hebbalkar) ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 24 ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದೀಗ ಮತ್ತೆ ಎರಡು ಕಂತು ಹಣ ಬಿಡುಗಡೆ ಮಾಡುತ್ತಿದ್ದೇವೆ. ಈ ಮೂಲಕ ಗೃಹಲಕ್ಷ್ಮಿಯೋಜನೆಯಡಿ ಒಟ್ಟು 26 ಕಂತಿನಲ್ಲಿ 52 ಸಾವಿರ ರೂಪಾಯಿ ಫಲಾನುಭವಿಗಳಿಗೆ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಹಾಯವಾಣಿಗೆ ಕರೆ ಮಾಡಿ
ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಯಾವಾಗ ಬರುವುದೋ ಎಂದು ಅಧಿಕಾರಿಗಳ ಬಳಿ ಅಲೆದು ಬೇಸತ್ತಿದ್ದೀರಾ? ಇನ್ನು ಮುಂದೆ ಯಾರ ಬಳಿಯೂ ಹೋಗಬೇಕಿಲ್ಲ. ಇದಕ್ಕಾಗಿ ಬಂದಿದೆ ಸಹಾಯವಾಣಿ! ಹೌದು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘181’ ಸಂಖ್ಯೆಯ ಸಹಾಯವಾಣಿಯನ್ನು ತೆರೆದಿದ್ದು, ಇದರಡಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿಯನ್ನೂ ತರಲಾಗಿದೆ.
ಆದರೆ, ಕೆಲವೊಮ್ಮೆ ಎರಡು ತಿಂಗಳು, ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಫಲಾನುಭವಿ ಮಾತ್ರವಲ್ಲದೆ, ಮನೆಯ ಬಹುತೇಕ ಸದಸ್ಯರು ಆಗಾಗ್ಗೆ ಖಾತೆ ಹಾಗೂ ಮೊಬೈಲ್‌ನಲ್ಲಿ ಸಂದೇಶ ಪರಿಶೀಲಿಸುತ್ತಾರೆ. ಆಗಲೂ ಸಮಾಧಾನವಾಗದೆ, ತಮ್ಮ ನೆರೆಹೊರೆಯವರನ್ನು ಕೇಳುವುದು, ಇಲ್ಲವೇ ಕಚೇರಿಗಳಿಗೆ ಭೇಟಿ ನೀಡಿ ‘ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ. ಯಾವಾಗ ಬರುತ್ತದೆ’ ಎಂದು ಕೇಳಿ ವಾಪಸ್ಸಾಗುತ್ತಿರುತ್ತಾರೆ. ಇನ್ನು ಮುಂದೆ ಎಲ್ಲಿಯೂ ಹೋಗಬೇಕಿಲ್ಲ. ನಿಮ್ಮ ಮೊಬೈಲ್‌ನಿಂದಲೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
Gruha Lakshmi Scheme: ಗೃಹಲಕ್ಷ್ಮಿ ಹಣ ಕೂಡಿಟ್ಟು ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ ನೀಡಿದ ಗೃಹಿಣಿ
ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೋ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಇಲ್ಲವೇ ತೆರಿಗೆ ಪಾವತಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿಗೃಹಲಕ್ಷ್ಮಿ ಹಣ ನಿಲ್ಲಿಸಲಾಗಿರುತ್ತದೆ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಖರವಾದ ಮಾಹಿತಿ ಪಡೆಯಬಹುದು. 181ಕ್ಕೆ ಕರೆ ಮಾಡಿದರೆ ಅಲ್ಲಿನ ಆಪರೇಟರ್‌ಗಳು ದೂರುದಾರರಿಂದ ಮಾಹಿತಿ ಪಡೆಯುತ್ತಾರೆ. ನಂತರ ದೂರುದಾರರು ಯಾವ ತಾಲೂಕಿಗೆ ಬರುವರೋ ಆ ತಾಲೂಕಿನ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುವರು. ಅವರಿಂದ ಮಾಹಿತಿ ಪಡೆದು, ಫಲಾನುಭವಿಗಳಿಗೆ ತಲುಪಿಸುತ್ತಾರೆ.