ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hasanamba Devi: ಇಂದು ಹಾಸನಾಂಬೆ ದರ್ಶನ ಮುಕ್ತಾಯ, ದೇವಿ ಸನ್ನಿಧಿಯಲ್ಲಿ ಮಾಂಗಲ್ಯ ಸರದ ಪವಾಡ!

Hassan: ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎನ್ನುವ ದಾಖಲೆ ಸೃಷ್ಟಿಯಾಗಿದೆ. ಇಂದು ಕೊನೆ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೂ ಭಕ್ತರ ದಂಡು ಪ್ರವಾಹ ರೂಪದಲ್ಲಿ ಹರಿದುಬರುತ್ತಿದೆ. ಇಂದು ಸಂಜೆ 7 ಗಂಟೆವರೆಗೂ ದರ್ಶನಾವಕಾಶವಿರಲಿದೆ.

ಹಾಸನ: ರಾಜ್ಯದ ಪ್ರಸಿದ್ಧ ಹಾಸನ ಶ್ರೀ ಹಾಸನಾಂಬೆ ದೇವಿಯ (Hasanamba Devi) ದರ್ಶನೋತ್ಸವ ಅಂತಿಮ ಘಟ್ಟ ತಲುಪಿದ್ದು, ಅಮ್ಮನ ದರ್ಶನಕ್ಕೆ ಇಂದು (ಅಕ್ಟೋಬರ್ 22) ಕೊನೆ ದಿನವಾಗಿದೆ. ಹೀಗಾಗಿ ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ (Hasanamba temple) ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ಅಕ್ಟೋಬರ್​ 10 ರಿಂದ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾದಾಗಿನಿಂದ ಅಕ್ಟೋಬರ್ 20ರವರೆಗೆ ಒಟ್ಟು 24 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದುಕೊಂಡಿದ್ದಾರೆ.

ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎನ್ನುವ ದಾಖಲೆ ಸೃಷ್ಟಿಯಾಗಿದೆ. ಇಂದು ಕೊನೆ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೂ ಭಕ್ತರ ದಂಡು ಪ್ರವಾಹ ರೂಪದಲ್ಲಿ ಹರಿದುಬರುತ್ತಿದೆ. ಇಂದು ಬೆಳಗ್ಗೆ 5ರಿಂದ ದರ್ಶನ ಆರಂಭವಾಗಿದ್ದು, ಸಂಜೆ 7 ಗಂಟೆವರೆಗೂ ದರ್ಶನಾವಕಾಶವಿರಲಿದೆ. ಸಂಜೆ 7ರ ಬಳಿಕ ಸಾರ್ವಜನಿಕ ದರ್ಶನ ಇರುವುದಿಲ್ಲ. ಗುರುವಾರ ಪೂಜಾ ವಿಧಿವಿಧಾನದ ಬಳಿಕ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಹಾಸನಾಂಬ ಉತ್ಸವಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: Hasanamba Devi: ಹಾಸನಾಂಬಾ ದೇವಿ ದರ್ಶನಕ್ಕೆ ಜನಸಾಗರ, ಬೆಂಗಳೂರಿನಿಂದ ಹಾಸನ ಬಸ್‌ ತಾತ್ಕಾಲಿಕ ಸ್ಥಗಿತ

ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಹೆಚ್ಚೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ 17.46 ಲಕ್ಷ ಭಕ್ತರು ದರ್ಶನ ಪಡೆದಿದ್ದರು.

ಕಳೆದುಕೊಂಡ 4 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ವಾಪಸ್

ಮೈಸೂರಿನಿಂದ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು, ದೇವಿಯ ದರ್ಶನ ಪಡೆಯುವ ವೇಳೆ ಭಕ್ತರ ದಟ್ಟಣೆ ಮಧ್ಯೆ ತಮ್ಮ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಇದೇ ವೇಳೆ ದರ್ಶನಕ್ಕೆ ಬಂದಿದ್ದ ಮತ್ತೊಬ್ಬ ಭಕ್ತರಿಗೆ ಈ ಸರವು ದೇವಾಲಯದ ಆವರಣದಲ್ಲಿ ಸಿಕ್ಕಿದೆ. ಆ ಭಕ್ತ ಮಾಂಗಲ್ಯ ಸರವನ್ನು ತನ್ನ ಬಳಿ ಇಟ್ಟುಕೊಳ್ಳದೇ ದೇವಾಲಯದ ಆಡಳಿತ ಮಂಡಳಿಗೆ ತಲುಪಿಸಿದ್ದಾರೆ.

ದೇವಿಯ ದರ್ಶನ ಪಡೆಯುವ ಭರದಲ್ಲಿ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಈ ಮಾಂಗಲ್ಯ ಸರವನ್ನು ಮಹಿಳೆ ಕಳೆದುಕೊಂಡಿದ್ದರು. ಎಷ್ಟೇ ಹುಡುಕಿದರು ಸಿಗದಿದ್ದಕ್ಕೆ ಸುಮ್ಮನಾಗಿದ್ದರು. ಈ ವೇಳೆ ಒಬ್ಬ ಭಕ್ತರು ತಮಗೆ ಸಿಕ್ಕ ಸರವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕರ್ತರ ಮೂಲಕ ದೇವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ, ಅಧಿಕಾರಿಗಳು ಸರ ಕಳೆದುಕೊಂಡಿದ್ದ ಮೈಸೂರಿನ ಮಹಿಳೆಯನ್ನು ಸಂಪರ್ಕಿಸಿ, ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ, ಖಚಿತಪಡಿಸಿಕೊಂಡ ನಂತರ ಅವರಿಗೆ ಮಾಂಗಲ್ಯ ಸರವನ್ನು ಹಿಂದಿರುಗಿಸಿದರು.

ತಮ್ಮ ಕಳೆದುಹೋದ ಮಾಂಗಲ್ಯ ಸರವು ಸುರಕ್ಷಿತವಾಗಿ ಮರಳಿ ಸಿಕ್ಕಿದ್ದಕ್ಕೆ ಮಹಿಳೆ ಸಂತಸ ವ್ಯಕ್ತಪಡಿಸಿ, ಸರವನ್ನು ಹಿಂದಿರುಗಿಸಿದ ಭಕ್ತರಿಗೆ ಮತ್ತು ಸಹಕರಿಸಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಮಾಂಗಲ್ಯ ಸರ ಸಿಕ್ಕಿದ್ದನ್ನು ಕೊಟ್ಟ ಭಕ್ತನ ಈ ಅಪೂರ್ವ ಪ್ರಾಮಾಣಿಕತೆಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹರೀಶ್‌ ಕೇರ

View all posts by this author