ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ (Hasanamba Temple) ಅ.09ರಿಂದ ತನ್ನ ದರ್ಶನ ಆರಂಭಿಸಿದ್ದಾಳೆ. ಮೊದಲ ದಿನವೇ ಭಕ್ತ ಸಾಗರವೇ ಹರಿದು ಬಂದಿತ್ತು. ಲಕ್ಷಕ್ಕೂ ಹೆಚ್ಚು ಭಕ್ತರು (Devotees) ಹಾಸನಾಂಬೆ ದರ್ಶನ ಪಡೆದಿದ್ದಾರೆ. ಇನ್ನು ದಾಖಲೆಯ ಆದಾಯ ಸಂಗ್ರಹವಾಗಿದೆ. ಇಂದು ಒಂದೇ ದಿನ ಒಂದು ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹಾಸನಾಂಬೆಯ ಬೊಕ್ಕಸಕ್ಕೆ ಹರಿದುಬಂದಿದೆ. ಪುರಾಣಪ್ರಸಿದ್ಧವಾಗಿರುವ ಹಾಸನಾಂಬೆ ದೇಗುಲದ ಬಾಗಿಲನ್ನೂ ತೆರೆದಿದ್ದು, ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಜೊತೆಗೆ ಅಧಿಕ ಆದಾಯವೂ ಸಂಗ್ರಹವಾಗುತ್ತಿದೆ.
ವೀಕೆಂಡ್ ಹಿನ್ನೆಲೆ ಟಿಕೆಟ್ ಮಾರಾಟದಿಂದ ದಾಖಲೆ ಆದಾಯ ಸಂಗ್ರಹವಾಗಿದೆ. ಒಂದು ಸಾವಿರ ಮೌಲ್ಯದ ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಸಂಗ್ರಹವಾಗಿದ್ದು, 300 ರೂ. ಮೌಲ್ಯದ ಟಿಕೆಟ್ ಮಾರಾಟದಿಂದ 35 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
ಆದಾಯ ಸಂಗ್ರಹದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದು, ಆರಂಭದ ದಿನಗಳಲ್ಲೇ ಹಾಸನಾಂಬೆ ದರ್ಶನದಲ್ಲಿ ದಾಖಲೆ ಆದಾಯ ಸಂಗ್ರಹವಾಗುತ್ತಿದೆ. ನಿನ್ನೆ 67 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷ 12 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಈ ವರ್ಷ 15 ಕೋಟಿಗೂ ಹೆಚ್ಚು ಆದಾಯ ಸಂಗ್ರಹ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Hasanamba Jathra 2025: ಹಾಸನಾಂಬ ದರ್ಶನ ಆರಂಭ; ಶಾಸ್ತ್ರೋಕ್ತವಾಗಿ ತೆರೆದ ಗರ್ಭಗುಡಿ ಬಾಗಿಲು
ಇದುವರೆಗೆ 91 ಸಾವಿರ ಭಕ್ತರು ದರ್ಶನ ಪಡೆದಿದ್ದಾರೆ. ಐದಾರು ವರ್ಷಗಳಿಗೆ ಹೋಲಿಸಿದೆ ಇದು ದಾಖಲೆ. ಯಾವುದೇ ಗೊಂದಲವಿಲ್ಲದೆ ದರ್ಶನ ಚೆನ್ನಾಗಿ ನಡೀತಿದೆ. ಪ್ರತಿದಿನ ಕನಿಷ್ಠ 2 ಲಕ್ಷ ಭಕ್ತರು ಬರುವ ಸಾಧ್ಯತೆಯಿದೆ. ಎಲ್ಲರೂ ಅ.18ರೊಳಗೆ ಬಂದು ದರ್ಶನ ಮಾಡಿಕೊಳ್ಳಿ. ಅ.15ಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಂದು ದರ್ಶನ ಮಾಡುತ್ತಾರೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.