Hate Speech Bill: 19 ವಿಧೇಯಕಗಳಿಗೆ ರಾಜ್ಯಪಾಲರ ಸಹಿ, ದ್ವೇಷ ಭಾಷಣ ಬಿಲ್‌ಗೆ ಅಂಕಿತವಿಲ್ಲ
ಕಳೆದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ- 2025 ಅನ್ನು ಅಂಗೀಕರಿಸಿತ್ತು. ವಿಧೇಯಕಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ವಿಪಕ್ಷಗಳ ವಿರೋಧದ ನಡುವೆ ಸರ್ಕಾರ ದ್ವೇಷ ಭಾಷಣ ಬಿಲ್ ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರು ಈ ವಿಧೇಯಕವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ -
ಬೆಂಗಳೂರು, ಜ.10: ಕಳೆದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ (Hate Speech) ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ವಿಧೇಯಕಕ್ಕೆ ರಾಜ್ಯಪಾಲರು (Governor) ಅನುಮೋದನೆ ನೀಡದೇ ಕಾನೂನು ಪರಿಶೀಲನೆಗಾಗಿ ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ಈ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಸರ್ಕಾರ ಮಂಡಿಸಿದ್ದ ಒಟ್ಟು 22 ವಿಧೇಯಕಗಳ ಪೈಕಿ 19 ವಿಧೇಯಕಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಸಹಿ ಹಾಕಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಹಾಗೂ ಪರಿಶಿಷ್ಟ ವರ್ಗಗಳ (ಉಪವರ್ಗೀಕರಣ) ವಿಧೇಯಕಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೇಳಿ 2 ವಿಧೇಯಕಗಳನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಕಳೆದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ- 2025 ಅನ್ನು ಅಂಗೀಕರಿಸಿತ್ತು. ಈ ವಿಧೇಯಕವು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ಪ್ರಚೋದಿಸುವ, ಪ್ರಸಾರ ಮಾಡುವ ಅಥವಾ ಪ್ರೋತ್ಸಾಹಿಸುವ ಕ್ರಿಯೆಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿತ್ತು. ವಿಧೇಯಕಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ವಿಪಕ್ಷಗಳ ವಿರೋಧದ ನಡುವೆ ಸರ್ಕಾರ ದ್ವೇಷ ಭಾಷಣ ಬಿಲ್ ಅಂಗೀಕರಿಸಿತ್ತು.
ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಗದ್ದಲಕ್ಕೆ ಕಾರಣವಾಗಿದ್ದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಲು ಹಿಂದೇಟು ಹಾಕಿದ್ದಾರೆ. ದ್ವೇಷ ಭಾಷಣ ಮಸೂದೆ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯಪಾಲರು ಮುಂದಾಗಿದ್ದಾರೆ.
Hate Speech Bill: ರಾಜ್ಯ, ಸಮಾಜದ ಹಿತಕ್ಕೆ ದ್ವೇಷ ಭಾಷಣ ನಿಷೇಧ ಕಾಯ್ದೆ: ಡಿ.ಕೆ. ಶಿವಕುಮಾರ್
ಅಧಿವೇಶನದಲ್ಲಿ ಮಂಡಿಸಿದ್ದ 22 ಮಸೂದೆಗಳನ್ನು ರಾಜ್ಯ ಸರ್ಕಾರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಟ್ಟಿತ್ತು. ಈ ಪೈಕಿ 19 ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮಸೂದೆ ಹಾಗೂ ಪರಿಶಿಷ್ಟ ವರ್ಗಗಳ (ಉಪವರ್ಗೀಕರಣ) ವಿಧೇಯಕಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಈ ಎರಡು ಮಸೂದೆಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ಕೇಳಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ.
ದ್ವೇಷ ಭಾಷಣ ಎಂದರೇನು?
ಮಾತು, ಯಾವುದೇ ರೀತಿಯ ಬರಹ, ಚಿಹ್ನೆಗಳು, ದೃಶ್ಯ ರೂಪಗಳು, ಎಲೆಕ್ಟ್ರಾನಿಕ್ ಸಂದೇಶಗಳು ಅಥವಾ ಇತರ ಮಾಧ್ಯಮಗಳ ಮೂಲಕ ಸಾರ್ವಜನಿಕ ದೃಷ್ಟಿಯಲ್ಲಿ ಪ್ರಕಟವಾಗುವ ಯಾವುದೇ ರೀತಿಯಲ್ಲಿ ವಿವಾದಾತ್ಮಕವಾಗಿ ಹೇಳಿಕೆ ನೀಡುವುದು. ಇದು ಜೀವಂತ ಅಥವಾ ಮೃತ ವ್ಯಕ್ತಿ, ಗುಂಪು ಅಥವಾ ಸಮುದಾಯದ ವಿರುದ್ಧ ಗಾಯ, ಅಸಾಮರಸ್ಯ, ದ್ವೇಷ, ಶತ್ರುತ್ವ ಅಥವಾ ದುರುದ್ದೇಶವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದರೆ ಅದೇ ದ್ವೇಷ ಭಾಷಣ.