ಹಾವೇರಿ: ಜಿಲ್ಲೆಯಲ್ಲಿ ಜೂನ್ 15, 16 ಮತ್ತು 17ರಂದು ಸುರಿದ ಮಳೆಯಿಂದ ರಾಣೇಬೆನ್ನೂರು, ರಟ್ಟಿಹಳ್ಳಿ, ಹಾನಗಲ್ ಹಾಗೂ ಹಾವೇರಿ ತಾಲೂಕುಗಳ (Haveri News) ವಿವಿಧ ಗ್ರಾಮಗಳಲ್ಲಿ 129 ರೈತರ 24.34 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ಬಳಿಕ 114 ರೈತರ 19.56 ಹೆಕ್ಟೇರ್ ಪ್ರದೇಶದ ಹಾನಿ ದೃಢಪಟ್ಟಿದೆ.
126 ವಿದ್ಯುತ್ ಕಂಬಗಳಿಗೆ ಹಾನಿ
ಪೂರ್ವ ಮುಂಗಾರು ಮಳೆ ಹಾಗೂ ಗಾಳಿಯಿಂದ ಜಿಲ್ಲೆಯಲ್ಲಿ 126 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಅಂದಾಜು ₹12.60 ಲಕ್ಷ ನಷ್ಟವಾಗಿದೆ ಎಂದು ಜಿಲ್ಲಾಡಳಿತ ವರದಿ ತಿಳಿಸಿದೆ. ಒಟ್ಟಿನಲ್ಲಿ, ಮಳೆ ಕೊರತೆಯ ನಡುವೆಯೂ ಜಿಲ್ಲೆಯ ಕೆಲ ಭಾಗಗಳಲ್ಲಿ ಕೆರೆಗಳು ಭರ್ತಿಯಾಗಿರುವುದು ನೀರಿನ ಸಂಗ್ರಹದ ದೃಷ್ಟಿಯಿಂದ ಆಶಾದಾಯಕವಾಗಿದ್ದರೆ, ಮುಂಗಾರು ಅವಧಿಯ ಶೇ.43.62ರಷ್ಟು ಮಳೆ ಕೊರತೆ ಕೃಷಿ ಹಾಗೂ ಕುಡಿಯುವ ನೀರಿನ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಮಳೆ ಕೊರತೆ ಮುಂದುವರಿದಿದ್ದರೂ, 103 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಜೂನ್ 1ರಿಂದ ಆಗಸ್ಟ್ 24ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.43.62ರಷ್ಟು ಮಳೆ ಕೊರತೆಯಾಗಿದೆ ಎಂದು ಜಿಲ್ಲಾ ಆಡಳಿತದ ಪ್ರಕೃತಿ ವಿಕೋಪ ವರದಿ ತಿಳಿಸಿದೆ.
ಜಿಲ್ಲೆಯಲ್ಲಿ ಆಗಸ್ಟ್ 1ರಿಂದ 24ರವರೆಗೆ 108.30 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದರೆ 68.40 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ.36.84ರಷ್ಟು ಕೊರತೆಯಾಗಿದೆ. ಕಳೆದ ಏಳು ದಿನಗಳಲ್ಲಿ 24 ಮಿ.ಮೀ. ವಾಡಿಕೆ ಮಳೆಗೆ 11.80 ಮಿ.ಮೀ. ಮಾತ್ರ ಮಳೆಯಾಗಿದೆ.
ತಾಲೂಕುವಾರು ಗಮನಿಸಿದರೆ ರಟ್ಟಿಹಳ್ಳಿ ತಾಲೂಕಿನಲ್ಲಿ ಮುಂಗಾರು ಅವಧಿಯಲ್ಲಿ ಶೇ.66.26, ಹಾನಗಲ್‌ನಲ್ಲಿ ಶೇ.49.70, ಹಾವೇರಿಯಲ್ಲಿ ಶೇ.48.71 ಹಾಗೂ ಹಿರೇಕೆರೂರಿನಲ್ಲಿ ಶೇ.40.55ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯ ಒಟ್ಟಾರೆ ಮುಂಗಾರು ಮಳೆ ಕೊರತೆ ಶೇ.43.62 ರಷ್ಟಿದೆ.
103 ಕೆರೆಗಳು ಸಂಪೂರ್ಣ ಭರ್ತಿ
ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯ ಒಟ್ಟು 2,058 ಕೆರೆಗಳಲ್ಲಿ 103 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. 361 ಕೆರೆಗಳು ಶೇ.51 ರಿಂದ 99ರಷ್ಟು, 328 ಕೆರೆಗಳು ಶೇ.31ರಿಂದ 50ರಷ್ಟು ಹಾಗೂ 1,199 ಕೆರೆಗಳು ಶೇ.1ರಿಂದ 30 ರಷ್ಟು ನೀರು ಹೊಂದಿವೆ. 67 ಕೆರೆಗಳು ಇನ್ನೂ ಖಾಲಿಯಾಗಿವೆ.
ಈ ಬಾರಿಯ ಗಣೇಶ ಚತುರ್ಥಿಗೆ ಪಿಓಪಿ ಗಣಪತಿ ಮೂರ್ತಿಗಳ ಬದಲು ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ
ಪ್ರಕೃತಿ ವಿಕೋಪದಿಂದ 3 ಸಾವು
2026-27ನೇ ಸಾಲಿನ ಪೂರ್ವ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮೂವರು ಮೃತಪಟ್ಟಿದ್ದು, ಒಟ್ಟು ₹15 ಲಕ್ಷ ಪರಿಹಾರ ನೀಡಲಾಗಿದೆ. ರಾಣೇಬೆನ್ನೂರಿನಲ್ಲಿ ಒಬ್ಬರು ಸಿಡಿಲು ಬಡಿದು ಮೃತಪಟ್ಟರೆ, ಹಾನಗಲ್‌ನಲ್ಲಿ ಕಟ್ಟಡ/ಮರ ಕುಸಿತದಿಂದ ಇಬ್ಬರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಎಂಟು ಜಾನುವಾರುಗಳ ಜೀವಹಾನಿಯಾಗಿದ್ದು, ₹93,500 ಪರಿಹಾರ ನೀಡಲಾಗಿದೆ. ಮುಂಗಾರು ಅವಧಿಯಲ್ಲಿ ಯಾವುದೇ ಮಾನವ ಅಥವಾ ಜಾನುವಾರು ಜೀವಹಾನಿ ವರದಿಯಾಗಿಲ್ಲ.