ಹಾವೇರಿ, ಆ.27: ವೈದ್ಯಕೀಯ ಶಿಕ್ಷಣ ಹಾಗೂ ಅರ್ಹತೆ ಇಲ್ಲದ ವ್ಯಕ್ತಿಯೊಬ್ಬ ಗ್ರಾಮೀಣ ಭಾಗದಲ್ಲಿ (Haveri News) ಕ್ಲಿನಿಕ್ ನಡೆಸಿ, ಜನರಿಗೆ ಚಿಕಿತ್ಸೆ ನೀಡುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಸುವರ್ಣ ಕರ್ನಾಟಕ ಕಿಸಾನ್ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಮಾಜಸೇವಕ ಶಿವಕುಮಾರ ತಳವಾರ ಅವರು ಸವಣೂರು ತಾಲೂಕಿನ ನದಿನೀರಲಗಿ ಗ್ರಾಮದ ರಾಘವೇಂದ್ರ ಯಲ್ಲಪ್ಪ ಪವಾರ ಎಂಬುವವರ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಹಿರೇಮುಗದೂರ ಗ್ರಾಮದಲ್ಲಿ ಸಂಜೆ 6ರಿಂದ ರಾತ್ರಿ 10ರವರೆಗೆ ಹಾಗೂ ನದಿನೀರಲಗಿ ಗ್ರಾಮದಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಕ್ಲಿನಿಕ್ ನಡೆಸುತ್ತಿರುವ ಆರೋಪವಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ವಿವಿಧ ವಯೋಮಾನದವರಿಗೆ ಇಂಜೆಕ್ಷನ್ ನೀಡುವುದು, ಸಲೈನ್ ಹಾಕುವುದು ಹಾಗೂ ಮಾತ್ರೆಗಳನ್ನು ನೀಡುವುದು ಸೇರಿದಂತೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಅರ್ಹ ವೈದ್ಯರ ಸಲಹೆ ಅಥವಾ ಮೇಲ್ವಿಚಾರಣೆ ಇಲ್ಲದೆ ಚಿಕಿತ್ಸೆ ನೀಡುತ್ತಿರುವುದರಿಂದ ಗ್ರಾಮೀಣ ಜನರ ಆರೋಗ್ಯ ಹಾಗೂ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
“ವೈದ್ಯಕೀಯ ಶಿಕ್ಷಣವನ್ನೇ ಪಡೆಯದ ವ್ಯಕ್ತಿ ವೈದ್ಯರಂತೆ ಚಿಕಿತ್ಸೆ ನೀಡುತ್ತಿದ್ದರೆ, ಇದು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದಂತಾಗುತ್ತದೆ. ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಆರೋಪ ಸಾಬೀತಾದಲ್ಲಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ದೂರುದಾರರು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗೆ ಸಲ್ಲಿಸಿರುವ ದೂರಿನೊಂದಿಗೆ, ಆರೋಪಿತ ವ್ಯಕ್ತಿಯ ಚಿಕಿತ್ಸಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿಡಿಯೋ ದಾಖಲೆಗಳನ್ನು ಪೆನ್‌ಡ್ರೈವ್‌ನಲ್ಲಿ ಲಗತ್ತಿಸಲಾಗಿದೆ ಎಂದು ತಿಳಿಸಲಾಗಿದೆ.