ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Yasir Ahmed Khan Pathan: ಜಮೀನು ಅತಿಕ್ರಮಣ ಆರೋಪ; ಶಿಗ್ಗಾವಿ ಶಾಸಕ ಪಠಾಣ್‌ ವಿರುದ್ಧ ಎಫ್‌ಐಆ‌ರ್

Haveri News: ಶಾಸಕ ಯಾಸೀರ್‌ ಅಹ್ಮದ್ ಖಾನ್ ಪಠಾಣ್, ಮುಖಬುಲ್ ಅಹ್ಮದ್‌ಖಾನ್ ಪಠಾಣ್‌ ಅವರು ವ್ಯಕ್ತಿಯೊಬ್ಬರ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ, ಮಾವಿನ ಗಿಡಗಳನ್ನು ನಾಶಪಡಿಸಿ ಕಳ್ಳತನ ಮಾಡಿಸಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ಹೀಗಾಗಿ ಎಫ್‌ಐಆರ್‌ ದಾಖಲಾಗಿದೆ.

ಹಾವೇರಿ: ಜಮೀನು ಅತಿಕ್ರಮಣ ಆರೋಪದಲ್ಲಿ ಶಿಗ್ಗಾವಿ ಕ್ಷೇತ್ರದ ಶಾಸಕ ಯಾಸೀರ್‌ ಅಹ್ಮದ್ ಖಾನ್ ಪಠಾಣ್‌ (MLA Yasir Ahmed Khan Pathan) ಸೇರಿ ಐವರ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 2025ರ ಜೂನ್ 5ರಂದು ನಡೆದಿದ್ದ ಕೃತ್ಯದ ಬಗ್ಗೆ ವಕೀಲ ಫಕ್ಕೀರಗೌಡ ವೀರನಗೌಡ ಪಾಟೀಲ ಅವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ಬಳಿಕ ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳಾದ ಶಾಸಕ ಯಾಸೀರ್‌ ಅಹ್ಮದ್ ಖಾನ್ ಪಠಾಣ್, ಮುಖಬುಲ್ ಅಹ್ಮದ್‌ಖಾನ್ ಪಠಾಣ್‌, ಸರ್ವೇ ಇಲಾಖೆಯ ಮುಖ್ಯ ಅಧಿಕಾರಿ ಜಗದೀಶ ವೈ.ಕೆ., ಎಡಿಎಲ್‌ಆರ್ ಸತ್ಯನಾರಾಯಣಪ್ಪ ಡಿ., ತಾಲ್ಲೂಕು ಸರ್ವೇಯರ್ ಮಂಜುನಾಥ ಮೂಲಿಮನಿ ವಿರುದ್ಧ ಎಫ್‌ಐಆ‌ರ್ ದಾಖಲಿಸಲಾಗಿದೆ.

ಎ1 ಶಾಸಕ ಯಾಸೀರ್‌ ಅಹ್ಮದ್ ಖಾನ್ ಪಠಾಣ್ ಮತ್ತು ಎ2 ಮುಖಬುಲ್ ಅಹ್ಮದ್‌ಖಾನ್ ಪಠಾಣ್‌ ಅವರು, ದೂರುದಾರರ ಜಮೀನಲ್ಲಿ ಜೆಸಿಬಿ ಮತ್ತು ಇತರ ಯಂತ್ರೋಪಕರಣಗಳ ಸಹಾಯದಿಂದ ಅತಿಕ್ರಮಣ ಮಾಡಿ 25 ಮಾವಿನ ಮರಗಳನ್ನು ನಾಶ ಮಾಡಿ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.

ಹಾನಗಲ್ ತಾಲೂಕಿನ ಹಳೇಕೋಟಿ ಹೋಬಳಿಯಲ್ಲಿ 12 ಎಕರೆ 22 ಗುಂಟೆ ಜಮೀನು ಇದ್ದು, ಈ ಜಮೀನಿನಲ್ಲಿ ಮಾವಿನ ಗಿಡಗಳನ್ನು ನೆಡಲಾಗಿದೆ. ಅವು ಸುಮಾರು 25 ವರ್ಷಗಳಷ್ಟು ಹಳೆಯದಾದ ಮಾವಿನಗಿಡಗಳಾಗಿವೆ. ನಮ್ಮ ಜಮೀನಿಗೆ ಹೊಂದಿಕೊಂಡು ಸಹೋದರ ಸಂಬಂಧಿಯಾದ ಅಜ್ಜನಗೌಡ ತಂದೆ ಕೊಟ್ರಗೌಡ ಪಾಟೀಲ ಅವರ 9 ಎಕರೆ 36 ಗುಂಟೆ ಜಮೀನು ಇದ್ದು, ಇದರಲ್ಲಿ ಯಾಸೀರ್‌ ಅಹ್ಮದ್ ಖಾನ್ ಪಠಾಣ್ ಮತ್ತು ಎ2 ಮುಖಬುಲ್ ಅಹ್ಮದ್‌ಖಾನ್ ಪಠಾಣ್‌ ಒಟ್ಟು 4 ಎಕರೆ 32 ಗುಂಟೆ ಜಮೀನನ್ನು ಖರೀದಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Murder Case: ಶಾಕಿಂಗ್‌ ಘಟನೆ, ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಇವರ ಸೂಚನೆ ಉಳಿದ ಆರೋಪಿತರು ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಭೂಮಿಯನ್ನು ಅಳತೆ ಮಾಡಿದ್ದಲ್ಲದೇ, ಜೆ.ಸಿ.ಬಿ ಮತ್ತು ಇತರ ಯಂತ್ರೋಪಕರಣಗಳ ಸಹಾಯದಿಂದ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ, ಮಾವಿನ ಗಿಡಗಳನ್ನು ನಾಶಪಡಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರುದಾರ ಫಕ್ಕೀರಗೌಡ ವೀರನಗೌಡ ಪಾಟೀಲ ಆರೋಪಿಸಿದ್ದಾರೆ.