ಹಾವೇರಿ, ನ.18: ನಗರದ ಜಿಲ್ಲಾಸ್ಪತ್ರೆಯಲ್ಲಿ ಘೋರ ಘಟನೆ (Haveri News) ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಕಣ್ಣುಬಿಡುವ ಮೋದಲೇ ಮಗು ದುರಂತ ಅಂತ್ಯ ಕಂಡಿರುವುದು ಕಂಡುಬಂದಿದೆ. ಮಹಿಳೆ ಹೆರಿಗೆಗೆ ಬಂದಿದ್ದ ವೇಳೆ ವೈದ್ಯರು ನಿರ್ಲಕ್ಷ್ಯ ತೋರಿದ್ದು, ಶೌಚಾಲಯಕ್ಕೆ ಕರೆದುಕೊಂಡು ಹೋಗುವಾಗ ಏಕಾಏಕಿ ಹೆರಿಗೆಯಾಗಿದ್ದರಿಂದ ಮಗು ನೆಲಕ್ಕೆ ಬಿದ್ದು ಮೃತಪಟ್ಟಿದೆ. ಕಾಕೋಳ ಗ್ರಾಮದ ರೂಪಾ ಮತ್ತು ಗಿರೀಶ ಕರಬಣ್ಣನವರ ದಂಪತಿ ಮಗು ಕಳೆದುಕೊಂಡವರು.
ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ ಗರ್ಭಿಣಿ ರೂಪಾ ಅವರನ್ನು ಒಂದು ತಾಸು ನೆಲದ ಮೇಲೆ ಕೂರಿಸಲಾಗಿದೆ. ಈ ವೇಳೆ ಶೌಚಾಲಯಕ್ಕೆ ಕರೆದುಕೊಂಡು ಹೋಗುವಾಗ ಹೆರಿಗೆಯಾಗಿ, ಆಗ ತಾನೇ ಜನಸಿದ ಶಿಶು ಮೃತಪಟ್ಟಿದೆ. ಇದಕ್ಕೆ ಆಸ್ಪತ್ರೆ ವೈದ್ಯರು, ಸಿಬ್ಬಂದಿಯೇ ಕಾರಣ ಎಂದು ರೂಪಾ ಪೋಷಕರು ಆರೋಪಿಸಿದ್ದಾರೆ.
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿ ರೂಪಾ ಅವರನ್ನು ಪತಿ ಗಿರೀಶ ಕರಬಣ್ಣನವರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಆರೈಕೆ ಮಾಡದೆ ಬೇಜವಬ್ದಾರಿ ತೋರಿದ್ದಾರೆ. ಕೊನೆಗೆ ಬೆಡ್ ಕೂಡ ನೀಡದ ಹಿನ್ನೆಲೆಯಲ್ಲಿ ಗರ್ಭಿಣಿ ನೆಲದ ಮೇಲೆಯೇ ಕೂತಿದ್ದಾರೆ. ಈ ವೇಳೆ ಶೌಚಾಲಯಕ್ಕೆ ಕರೆದುಕೊಂಡು ಹೋಗುವಾಗ ಹೆರಿಗೆಯಾಗಿ ಆಗ ತಾನೇ ಜನಿಸಿದ ಹಸಗೂಸು ಮೃತಪಟ್ಟಿದ್ದು, ತಾಯಿ ರೂಪಾ ಆಘಾತಕ್ಕೊಳಗಾಗಿದ್ದಾರೆ.
ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ತಂದೆ ಗಿರೀಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.