ಹಾವೇರಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹಾವೇರಿ ಜಿಲ್ಲೆಯಲ್ಲಿ (Haveri News) ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ. ಜೂನ್‌ನಿಂದ ಸೆಪ್ಟೆಂಬರ್ 8ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.45.41ರಷ್ಟು ಮಳೆ ಕೊರತೆಯಾಗಿದ್ದು (Rain deficit), ಸೆಪ್ಟೆಂಬರ್ 1ರಿಂದ 8ರವರೆಗೆ ಶೇ.71.84ರಷ್ಟು ಮಳೆ ಅಭಾವ ದಾಖಲಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 8ರವರೆಗೆ ಜಿಲ್ಲೆಯಲ್ಲಿ ವಾಡಿಕೆ 426.80 ಮಿ.ಮೀ. ಮಳೆಯಾಗಬೇಕಾಗಿದ್ದರೆ, ವಾಸ್ತವವಾಗಿ 233 ಮಿ.ಮೀ. ಮಾತ್ರ ಮಳೆಯಾಗಿದೆ.
ಜೂನ್‌ನಲ್ಲಿ ಶೇ.54.45, ಜುಲೈನಲ್ಲಿ ಶೇ.40.22 ಹಾಗೂ ಆಗಸ್ಟ್‌ನಲ್ಲಿ ಶೇ.39.98ರಷ್ಟು ಮಳೆ ಕೊರತೆಯಾಗಿದೆ. ಸೆಪ್ಟೆಂಬರ್ ಮೊದಲ ಎಂಟು ದಿನಗಳಲ್ಲೂ ವಾಡಿಕೆ 17.40 ಮಿ.ಮೀ. ಬದಲಿಗೆ ಕೇವಲ 4.90 ಮಿ.ಮೀ. ಮಳೆಯಾಗಿದೆ.
ತಾಲೂಕುವಾರು ನೋಡಿದರೆ ಹಾವೇರಿ ತಾಲೂಕಿನಲ್ಲಿ ಶೇ.50.12, ಹಾನಗಲ್‌ನಲ್ಲಿ ಶೇ.50.47, ಹಿರೇಕೆರೂರಿನಲ್ಲಿ ಶೇ.40.75, ಸವಣೂರಿನಲ್ಲಿ ಶೇ.43.64, ಶಿಗ್ಗಾಂವಿಯಲ್ಲಿ ಶೇ.33.84 ಹಾಗೂ ರಟ್ಟಿಹಳ್ಳಿಯಲ್ಲಿ ಶೇ.66.11ರಷ್ಟು ಮುಂಗಾರು ಮಳೆ ಕೊರತೆ ದಾಖಲಾಗಿದೆ. ರಾಣೇಬೆನ್ನೂರಿನಲ್ಲಿ ಮಾತ್ರ ಶೇ.21.22ರಷ್ಟು ಕೊರತೆಯಾಗಿದೆ.
ಕೆರೆಗಳಲ್ಲೂ ನೀರಿನ ಕೊರತೆ
ಜಿಲ್ಲೆಯ 2,058 ಕೆರೆಗಳ ಪೈಕಿ 146 ಕೆರೆಗಳು ಮಾತ್ರ ಸಂಪೂರ್ಣವಾಗಿ ಭರ್ತಿಯಾಗಿವೆ. 1,100 ಕೆರೆಗಳಲ್ಲಿ ಶೇ.1ರಿಂದ 30ರಷ್ಟು, 311 ಕೆರೆಗಳಲ್ಲಿ ಶೇ.31ರಿಂದ 50ರಷ್ಟು ಹಾಗೂ 500 ಕೆರೆಗಳಲ್ಲಿ ಶೇ.51ರಿಂದ 99ರಷ್ಟು ನೀರು ಸಂಗ್ರಹವಾಗಿದೆ. ಒಂದು ಕೆರೆ ಸಂಪೂರ್ಣ ಖಾಲಿಯಾಗಿದೆ.
ಮಳೆ ಕೊರತೆ ಹಾಗೂ ಜಲಮೂಲಗಳ ಸ್ಥಿತಿ ಕೃಷಿ ಮತ್ತು ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿಸಿದೆ. ಈಗಾಗಲೇ ಜಿಲ್ಲೆಯ ಆರು ತಾಲೂಕುಗಳ 33 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 39 ಗ್ರಾಮಗಳಿಗೆ 44 ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹೊಸದಾಗಿ 66 ಗ್ರಾಮಗಳಿಗೆ 70 ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗಿದೆ.
ಎಲ್‌ನಿನೋ ಎಫೆಕ್ಟ್‌ನಿಂದ ತೀವ್ರ ಪ್ರಕೃತಿ ವಿಕೋಪದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಹಾಗೂ ಕುಡಿಯುವ ನೀರಿಗೆ ಕಂಟಕ ಎದುರಾಗಿದೆ. ಇದರ ಭೀಕರ ಪರಿಣಾಮ ಪ್ರತಿಯೊಬ್ಬರ ಜೀವನದ ಮೇಲೂ ಬೀರುತ್ತಿದೆ. ಬರದ ಹೊಡೆತಕ್ಕೆ ಕೃಷಿಕರು ಈಗಾಗಲೇ ಭಾರಿ ನಷ್ಟ ಅನುಭವಿಸಿದ್ದಾರೆ.
![]()
ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಸಾಲ ಮನ್ನಾ, ಬರ ಪರಿಹಾರ ಹಾಗೂ ಬೆಳೆವಿಮೆ ನೀಡಬೇಕು. ಬಡವರ ಬದುಕು ಸುಗಮಗೊಳಿಸಲು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು.
-ಹನುಮಂತಪ್ಪ ಕಬ್ಬಾರ, ರೈತ ಮುಖಂಡ.
ವರದಿ: ಪರಶುರಾಮ ಎಸ್.ಡಿ.