ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Haveri News: ನಿವೇಶನ, ಕೃಷಿ ಭೂಮಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹ; ಹಾವೇರಿಯ ಡಿಸಿ ಕಚೇರಿ ಎದುರು ವಿವಿಧ ಗ್ರಾಮಸ್ಥರ ಪ್ರತಿಭಟನೆ

Haveri News: ನಿವೇಶನ ಹಾಗೂ ಕೃಷಿ ಭೂಮಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ, ರಾಣೆಬೆನ್ನೂರು ತಾಲೂಕಿನ ನೂರಾರು ಬಡ ಕುಟುಂಬಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬ ಸಮೇತ ಧರಣಿ ನಡೆಸಿದರು. ಈ ವೇಳೆ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಹಾವೇರಿ, ನ.2: ಮೂರು ದಶಕಗಳಿಂದ ಅರಣ್ಯ ಭೂಮಿ ಹಾಗೂ ಕಂದಾಯ ಇಲಾಖೆಯ ಗೋಮಾಳ ಪ್ರದೇಶಗಳಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದರೂ ಇಂದಿಗೂ ಹಕ್ಕುಪತ್ರ ದೊರೆಯದೆ ಸರ್ಕಾರದ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಆರೋಪಿಸಿ ರಾಣೆಬೆನ್ನೂರು ತಾಲೂಕಿನ ನೂರಾರು ಬಡ ಕುಟುಂಬಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು (Haveri News) ಕುಟುಂಬ ಸಮೇತ ಅಹೋರಾತ್ರಿ ಧರಣಿ ನಡೆಸಿ, ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.

ರಾಣೆಬೆನ್ನೂರು ತಾಲೂಕಿನ ಹೀಲದಹಳ್ಳಿ, ಕೂನಬೇವು ಹಾಗೂ ಐರಣಿ ಗ್ರಾಮಗಳ ಬಡ ಕುಟುಂಬಗಳು ನಿವೇಶನ ಮತ್ತು ಕೃಷಿ ಭೂಮಿಯ ಹಕ್ಕುಪತ್ರಕ್ಕಾಗಿ ಹಲವು ವರ್ಷಗಳಿಂದ ಕಚೇರಿಗಳಿಗೆ ಅಲೆದಾಡುತ್ತಿವೆ. ತಹಸೀಲ್ದಾರ್ ಕಚೇರಿಯಲ್ಲಿ ನಮೂನೆ 57ರ ಅಡಿಯಲ್ಲಿ ಸುಮಾರು 1,088 ಅರ್ಜಿಗಳನ್ನು ಸಲ್ಲಿಸಿದ್ದರೂ ಇದುವರೆಗೆ ಸೂಕ್ತ ನ್ಯಾಯ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಕೆಲವು ಕುಟುಂಬಗಳು ವಾಸಕ್ಕೆ ಸ್ವಂತ ನಿವೇಶನವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರೆ, ಇನ್ನೂ ಕೆಲವು ಕುಟುಂಬಗಳು ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿವೆ. ಆದರೆ ಭೂಮಿಯ ಹಕ್ಕುಪತ್ರ ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ದಶಕಗಳಿಂದ ಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡಿರುವ ಬಡ ಕುಟುಂಬಗಳ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ರಾಣೆಬೆನ್ನೂರು ತಾಲೂಕಿನ ಮಾಗೋಡು ಹಾಗೂ ಮುದೇನೂರು ಗ್ರಾಮಗಳಲ್ಲಿಯೂ ಇದೇ ರೀತಿಯ ಸಮಸ್ಯೆಯಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಾಗೂ ಕೃಷಿ ಭೂಮಿಗೆ ಹಕ್ಕುಪತ್ರ ವಿತರಿಸಬೇಕು. ಅಕ್ರಮ-ಸಕ್ರಮ ಪ್ರಕ್ರಿಯೆಯಡಿ ಅರ್ಹರ ಅರ್ಜಿಗಳನ್ನು ಪರಿಶೀಲಿಸಿ ಭೂಮಿಯ ಹಕ್ಕು ಒದಗಿಸುವುದರ ಜತೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿ, ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಸೇರಿದಂತೆ ನೂರಾರು ಮಹಿಳೆಯರು, ನೊಂದ ಫಲಾನುಭವಿಗಳು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.