ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Haveri Drought: ಮಳೆ ಇಲ್ಲದೆ ಬೆಳೆ ನಾಶಕ್ಕೆ ಮುಂದಾದ ಅನ್ನದಾತ; ಬರಗಾಲ ಘೋಷಣೆಗೆ ಆಗ್ರಹ

Rain Deficit in Haveri: ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೆ ಒಣಗುತ್ತಿವೆ. ವಾಡಿಕೆಯಷ್ಟೂ ಮಳೆಯಿಲ್ಲದೆ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗುವ ಭೀತಿ ಎದುರಾಗಿದೆ.

ವರದಿ: ಪರಶುರಾಮ ಎಸ್.ಡಿ, ಹಾವೇರಿ

ಜೂನ್‌ ತಿಂಗಳಲ್ಲೇ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಬೆಳೆಗಳು ಒಣಗುತ್ತಿವೆ. ಈ ವೇಳೆಗೆ ವಾಡಿಕೆ ಮಳೆ 674 ಮಿ.ಮೀ ಆಗಬೇಕಿತ್ತು. ಆದರೆ, ಇಲ್ಲಿವರೆಗೆ ಕೇವಲ 380 ಮಿ.ಮೀ ಮಳೆಯಾಗಿದ್ದು, ಶೇ.44 ರಷ್ಟು ಕೊರತೆ ಉಂಟಾಗಿದೆ. ಇದರಿಂದ ಬೆಳೆಗಳು ನಾಶವಾಗುತ್ತಿವೆ. ಮಳೆಯ ಕೊರತೆಯಿಂದ (Haveri Drought) ರಾಜ್ಯದಲ್ಲಿ ಕೃಷಿ ವಲಯವೇ ನೆಲಕಚ್ಚುವ ಹಂತಕ್ಕೆ ತಲುಪಿದೆ.

ಒಂದು ವಾರದಲ್ಲಿ ಸಮರ್ಪಕ ಮಳೆ ಬಾರದೇ ಹೋದಲ್ಲಿ ಜಿಲ್ಲೆಯಲ್ಲಿ ಕೃಷಿ ಬಿತ್ತನೆಯಾಗುವ 3.5 ಲಕ್ಷ ಹೆಕ್ಟೇರ್ ಪ್ರದೇಶದ ಅಂದಾಜು 2.1 ಲಕ್ಷ ಹೇಕ್ಟೇರ್ ಪ್ರೆದೇಶದಲ್ಲಿರುವ ಮೆಕ್ಕೆ ಜೋಳ, ಸೋಯಾಬಿನ್ ಸೇರಿದಂತೆ ವಿವಿಧ ಅಲ್ಪಾವಧಿ ಬೆಳೆಗಳು ನಾಶವಾಗಲಿದ್ದು, ಅಂದಾಜು 370 ಕೋಟಿ ನಷ್ಟವಾಗುವ ಸಾಧ್ಯತೆ ಇದೆ.

ಬರಗಾಲ ಘೋಷಣೆ ಒತ್ತಾಯ:

ಮಳೆ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ-ಸೋಲ ಮಾಡಿ ಕೃಷಿ ಮಾಡಿಕೊಂಡಿರುವ ಅನ್ನದಾತರು ಪ್ರಕೃತಿ ವಿಕೋಪದಿಂದ ನಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು, ಬರಗಾಲ ಘೋಷಣೆ ಮಾಡಿ, ರೈತರ ನೆರವಿಗೆ ಬರಬೇಕು. ತುರ್ತು ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಹಣವನ್ನು ರೈತರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಜಿಲ್ಲೆಯ ರೈತರು ಆಗ್ರಹಿಸುತ್ತಿದ್ದಾರೆ.

Rain Deficit in Haveri  (1)

ರೈತರಿಗೆ ಸಾಲಗಾರರ ಕಾಟ:

ಬರಗಾಲ ಕಾಣಿಸಿಕೊಳ್ಳುತ್ತಿದ್ದಂತೆ ರೈತರಿಗೆ ಬ್ಯಾಂಕ್‌, ಫೈನಾನ್ಸ್‌ ಕಂಪನಿಗಳು, ಖಾಸಗಿ ಲೇವಾದೇವಿದಾರರು, ಬಡ್ಡಿ ದಂಧೆಕೋರರು ಸಾಲ ಕಟ್ಟುವಂತೆ ಮುಗಿ ಬೀಳುತ್ತಿದ್ದಾರೆ. ಇದರಿಂದ ರೈತರ ಕುಟುಂಬಕ್ಕೆ ಬಾರಿ ಮಾನಸಿಕ ಕಿರುಕುಳ ಉಂಟಾಗುತ್ತಿದೆ. ಕೃಷಿಗೆ ಹಾಕಿದ ಬಂಡವಾಳವೂ ವಾಪಸ್‌ ಬಾರದ ಸ್ಥಿತಿ ಉಂಟಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಬೆಳೆ ನಾಶ ಮಾಡುತ್ತಿರುವ ರೈತರು:

ಮಳೆ ಇಲ್ಲದೆ ಬೆಳೆ ಒಣಗುತ್ತಿದ್ದು, ಕೆಲ ರೈತರ ನೂರಾರು ಎಕರೆ ಮೆಕ್ಕೆಜೋಳ ಸೇರಿ ಇತರೆ ಅಲ್ಪಾವಧಿ ಬೆಳೆಗಳನ್ನು ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಪಡಿಸಿದ್ದಾರೆ. ಬೆಳೆಗಾಗಿ ಮಾಡಿರುವ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಈಗಾಗಲೇ ಹಾವೇರಿ ಜಿಲ್ಲೆ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯಮಟ್ಟದಲ್ಲಿಯೇ ಸದ್ದು ಮಾಡಿದೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕಾಗಿದೆ.

ಮೇವಿನ ಕೊರತೆ:

ಮಾನ್ಸೂನ್ ಮಳೆಯ ಕೊರತೆ ಹೀಗೆ ಮುಂದುವರಿದರೆ ದನಕರುಗಳಿಗೆ ಮೇವಿನ ಕೊರತೆಯಾಗಲಿದೆ. ಕೃಷಿಯನ್ನೇ ಅವಲಂಬಿಸಿರುವ ಹಾವೇರಿ ಜಿಲ್ಲೆಗೆ 3 ತಿಂಗಳಿಗೆ ಅಂದಾಜು 50 ಸಾವಿರ ಟನ್ ಮೇವು ಬೇಕಿದೆ. ದಾಸ್ತಾನು ಬಗ್ಗೆ ಮಾಹಿತಿ ಇಲ್ಲದಾಗಿದೆ. ಗೋ ಶಾಲೆ ಆರಂಭಿಸಬೇಕು, ಇಲ್ಲಿವರೆಗೆ ಇದರ ಬಗ್ಗೆ ಮಾಹಿತಿ ಇಲ್ಲ.

ಕುಡಿಯುವ ನೀರಿಗಾಗಿ ಹಾಹಾಕಾರ:

ಜಿಲ್ಲೆಯಲ್ಲಿ ಮಳೆ ಇಲ್ಲದೇ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ನಾಲ್ಕು ನದಿಯಲ್ಲಿ ನೀರಿಲ್ಲ. ಮಳೆ ಕೊರತೆಯಿಂದ ಅಂತರ್ಜಲ ಕುಸಿಯುತ್ತಿದೆ. ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಜಿಲ್ಲೆಯ 705 ಹಳ್ಳಿಗಳಲ್ಲಿ 64ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಅಲ್ಲಿ ಟ್ಯಾಂಕರ್ ಮೂಲಕ ನೀರು ನೀಡಲು ಸಿದ್ಧತೆ ನಡೆಸಲಾಗಿದೆ.

ಸಿಗುತ್ತಿಲ್ಲ ವಿಬಿ ಜಿ ರಾಮ್ ಜಿ ಕೆಲಸ:

ಮಳೆ ಇಲ್ಲದೇ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೇ ನಗರದ ಕಡೆಗೆ ವಲಸೆ ಹೊರಟಿದ್ದಾರೆ. ಇದುವರೆಗೆ ಬರಗಾಲದಲ್ಲಿ ಕೆಲಸ ನೀಡಬೇಕಾದ ಗ್ರಾಮ ಪಂಚಾಯಿತಿಗಳು ಯಾವುದೇ ಕೆಲಸ ಕೊಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ 225 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಡ ಕೂಲಿ ಕಾರ್ಮಿಕರಿಗೆ ನೀಡಬೇಕಾದ ಉದ್ಯೋಗ ಖಾತ್ರಿ ಕೆಲಸ ನಡೆಯುತ್ತಿಲ್ಲ. ಇದರ ಬಗ್ಗೆ ಜಿ.ಪಂ ಸಿಇಓ ಕೂಡಾ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬರದ ಬವಣೆಯಲ್ಲಿ ಸಿಲುಕಿಕೊಂಡ ರೈತರ ನೆರವಿಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಬೇಕು. ಸ್ಥಳೀಯ ಶಾಸಕರು ರೈತರ ಬಗ್ಗೆ ಸದನದಲ್ಲಿ ಮಾತನಾಡಿ ಬರಗಾಲ ಘೋಷಣೆ ಮಾಡಿಸಬೇಕು. ಬಡ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೇ ಬೇರೆ ಜಿಲ್ಲೆ ರಾಜ್ಯಗಳ ನಗರಕ್ಕೆ ವಲಗೆ ಹೋಗುತ್ತಿದ್ದಾರೆ. ವಲಸೆ ಹೋಗುವುದನ್ನು ತಪ್ಪಿಸಲು ಬಡ ಕೂಲಿ ಕಾರ್ಮಿಕರಿಗೆ ಜಿ ರಾಮ್‌ ಜಿ ಯೋಜನೆಯಡಿ ಕನಿಷ್ಠ 150 ದಿನಗಳ ಕಾಲ ಉದ್ಯೋಗ ನೀಡಬೇಕು ಎಂಬ ಆಗ್ರಹ ಜಿಲ್ಲೆಯಲ್ಲಿ ಕೇಳಿಬಂದಿದೆ.