- ಪರಶುರಾಮ ಎಸ್.ಡಿ.
ಹಾವೇರಿ, ಆ. 18: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹಾವೇರಿ ಜಿಲ್ಲೆಯಲ್ಲಿ (Haveri News) ಜಲಮೂಲಗಳ ಸ್ಥಿತಿ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಮಳೆಗಾಲದ ಅವಧಿಯಲ್ಲಿಯೇ ಜಿಲ್ಲೆಯ ನೂರಾರು ಕೆರೆಗಳು ಖಾಲಿಯಾಗಿದ್ದು, ಕೃಷಿ ಚಟುವಟಿಕೆಗಳ ಜತೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಭೀತಿಯೂ ಎದುರಾಗಿದೆ. ಜಿಲ್ಲೆಯಾದ್ಯಂತ ವಾಡಿಕೆಗಿಂತ ಶೇ. 43.15ರಷ್ಟು ಮಳೆ ಕೊರತೆ ದಾಖಲಾಗಿರುವುದು ಬರದ ಛಾಯೆ ಮತ್ತಷ್ಟು ಗಾಢವಾಗುವ ಮುನ್ಸೂಚನೆ ನೀಡಿದೆ. ಜಿಲ್ಲೆಯ 2,058 ಕೆರೆಗಳ ಪೈಕಿ ಕೇವಲ 14 ಕೆರೆಗಳು ಮಾತ್ರ ಸಂಪೂರ್ಣ ಭರ್ತಿಯಾಗಿದ್ದು, ಬಹುತೇಕ ಕೆರೆಗಳು ನೀರಿನ ಕೊರತೆಯಿಂದ ಬಳಲುತ್ತಿವೆ.
ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಂಗಾರು ಕೈಕೊಟ್ಟಿರುವುದು ದೊಡ್ಡ ಹೊಡೆತವಾಗಿದೆ. ಹೊಲಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಸಮರ್ಪಕ ತೇವಾಂಶ ದೊರೆಯದೆ ಬೆಳೆಗಳ ಬೆಳವಣಿಗೆ ಕುಂಠಿತವಾಗುವ ಆತಂಕ ಎದುರಾಗಿದೆ. ಈಗಾಗಲೇ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಮಂದಗತಿಯಾಗಿದ್ದು, ಕೆರೆ-ಕಟ್ಟೆಗಳು ತುಂಬದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ತಾಲೂಕುವಾರು ಮಳೆಯ ಕೊರತೆ
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆಯ ಪ್ರಮಾಣದಲ್ಲೂ ತೀವ್ರ ವ್ಯತ್ಯಾಸ ಕಂಡುಬಂದಿದೆ. ಬ್ಯಾಡಗಿ ತಾಲೂಕಿನಲ್ಲಿ ಶೇ. 65.99ರಷ್ಟು, ಹಾನಗಲ್‌ನಲ್ಲಿ ಶೇ. 49.12, ಹಾವೇರಿಯಲ್ಲಿ ಶೇ. 48.91, ಹಿರೇಕೆರೂರಿನಲ್ಲಿ ಶೇ. 40.09, ರಾಣೇಬೆನ್ನೂರಿನಲ್ಲಿ ಶೇ. 14.46, ಸವಣೂರಿನಲ್ಲಿ ಶೇ. 37.65 ಹಾಗೂ ಶಿಗ್ಗಾಂವಿಯಲ್ಲಿ ಶೇ. 29.94ರಷ್ಟು ಮಳೆಯ ಕೊರತೆ ದಾಖಲಾಗಿದೆ. ಇದರ ಪರಿಣಾಮವಾಗಿ ಮಳೆನೀರನ್ನೇ ಅವಲಂಬಿಸಿರುವ ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳು ಬತ್ತುತ್ತಿವೆ. ಕೆರೆಗಳು ತುಂಬದಿರುವುದರಿಂದ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆಯೂ ಹೆಚ್ಚಾಗಿದೆ.
ಕೆರೆಗಳು ತುಂಬದಿದ್ದರೆ ಸಂಕಷ್ಟ ಮತ್ತಷ್ಟು ಗಂಭೀರ
ಜಿಲ್ಲೆಯ ಪ್ರಮುಖ ಜಲಮೂಲಗಳಾಗಿರುವ ಕೆರೆಗಳು ಮಳೆಗಾಲದಲ್ಲಿಯೇ ಖಾಲಿಯಾಗಿವೆ. ಮಳೆ ಮುಂದಿನ ದಿನಗಳಲ್ಲಿ ಕೈಕೊಟ್ಟರೆ ಕೃಷಿ ಮಾತ್ರವಲ್ಲದೆ ಜಾನುವಾರುಗಳಿಗೆ ನೀರು, ಗ್ರಾಮೀಣ ಕುಡಿಯುವ ನೀರು ಹಾಗೂ ಅಂತರ್ಜಲದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. 2,058 ಕೆರೆಗಳ ಪೈಕಿ ಕೇವಲ 14 ಕೆರೆಗಳು ಮಾತ್ರ ಭರ್ತಿಯಾಗಿರುವುದು ಜಿಲ್ಲೆಯ ಜಲ ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸುತ್ತದೆ. ಕೆಲವೆಡೆ ಕೆರೆಗಳಿಗೆ ನೀರು ಹರಿದುಬಂದಿದ್ದರೂ ಸಮರ್ಪಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ.
ಅಪಾಯಕಾರಿ ತಗ್ಗು-ಗುಂಡಿಯಿಂದ ಕೂಡಿರುವ ದೇವಗಿರಿ ರಸ್ತೆಯಿಂದ ಸ್ಥಳೀಯರಿಗೆ ಕಿರಿಕಿರಿ
ಮಳೆ ಕೊರತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಾಲೂಕುವಾರು ಜಲಮೂಲಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಲಭ್ಯತೆ ಕುರಿತು ಸಮಗ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಸಾಧ್ಯತೆ ಇರುವ ಜಲಮೂಲಗಳನ್ನು ಗುರುತಿಸಿ, ಅಗತ್ಯವಿರುವ ಕಡೆ ನೀರು ಹರಿಸುವ ಯೋಜನೆ ರೂಪಿಸಬೇಕೆಂಬ ಒತ್ತಾಯ ರೈತರಿಂದ ಕೇಳಿಬರುತ್ತಿದೆ.