ಹಾವೇರಿ, ಸೆ. 17: ಪೊಲೀಸ್ ಠಾಣೆ ಎಂದರೆ ಕಾನೂನು-ಸುವ್ಯವಸ್ಥೆಯ ಕಾರ್ಯನಿರ್ವಹಣೆಯ ಕೇಂದ್ರ. ಆದರೆ ಹಾವೇರಿ ನಗರದ ಹಳೆ ಕೋರ್ಟ್ ಆವರಣದಲ್ಲಿರುವ ಜಿಲ್ಲಾ (Haveri News) ಸೈಬರ್ ಕ್ರೈಂ ಪೊಲೀಸ್ ಠಾಣೆ ಇದಕ್ಕೊಂದು ಭಿನ್ನವಾದ ಸಂದೇಶ ಸಾರಿದೆ. ಧರ್ಮದ ಗಡಿ ಮೀರಿ ಸೌಹಾರ್ದತೆ, ಸಹಬಾಳ್ವೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿಎಸ್‌ಪಿ ಕೆ. ಸಮೀವುಲ್ಲಾ ಠಾಣೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, ತಾವೇ ಖುದ್ದಾಗಿ ಪೂಜಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹಿಂದೂ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಹಬ್ಬವನ್ನು ಆಚರಿಸಿದರು. ಗುರುವಾರ ವಿಶೇಷ ಸತ್ಯನಾರಾಯಣ ಪೂಜೆ ಹಮ್ಮಿಕೊಂಡು ಕುಟುಂಬ ಸಮೇತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು.
ಪೂಜೆಯ ಬಳಿಕ ಠಾಣೆಯಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಒಟ್ಟಾಗಿ ಭಾಗವಹಿಸಿದರು. ಕರ್ತವ್ಯದ ಒತ್ತಡದ ನಡುವೆಯೂ ಎಲ್ಲರೂ ಒಂದಾಗಿ ಹಬ್ಬ ಆಚರಿಸುವ ಮೂಲಕ ಠಾಣೆಯ ವಾತಾವರಣದಲ್ಲಿ ಸಹೋದರತ್ವದ ಭಾವ ಮೂಡಿಸಿತು.
ಕರ್ತವ್ಯದಲ್ಲಿ ಕಠಿಣತೆ, ಬದುಕಿನಲ್ಲಿ ಸೌಹಾರ್ದತೆ
ಕಾನೂನು-ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸ್ ಇಲಾಖೆಯಲ್ಲಿ ವಿವಿಧ ಧರ್ಮ, ಜಾತಿ ಹಾಗೂ ಸಮುದಾಯಗಳ ಸಿಬ್ಬಂದಿ ಒಟ್ಟಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸೌಹಾರ್ದತೆ ಪೊಲೀಸ್ ತಂಡದ ಒಗ್ಗಟ್ಟಿಗೆ ಮತ್ತಷ್ಟು ಬಲ ನೀಡುತ್ತದೆ.
ಸೈಬರ್ ಅಪರಾಧಗಳ ತನಿಖೆ, ಸಾರ್ವಜನಿಕರ ರಕ್ಷಣೆ ಸೇರಿದಂತೆ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸೈಬರ್ ಕ್ರೈಂ ಠಾಣೆಯಲ್ಲಿ ನಡೆದ ಈ ಸರಳ ಆಚರಣೆ, ‘ಧರ್ಮ ಬೇರೆ ಇರಬಹುದು, ಆದರೆ ಮಾನವೀಯತೆ ಒಂದೇʼ ಎಂಬ ಸಂದೇಶವನ್ನು ಸಾರಿದಂತಾಗಿದೆ.
ಪೊಲೀಸ್ ಠಾಣೆಯಲ್ಲೊಂದು ಗಣಪತಿ ಪ್ರತಿಷ್ಠಾಪನೆ, ಒಂದಾಗಿ ನಡೆದ ಪೂಜೆ, ಒಟ್ಟಿಗೆ ಸವಿದ ಪ್ರಸಾದ; ಹಾವೇರಿ ಸೈಬರ್ ಕ್ರೈಂ ಠಾಣೆಯ ಈ ಆಚರಣೆ ಭಾವೈಕ್ಯತೆಯ ಮಾದರಿ ಕ್ಷಣವಾಗಿ ಗಮನ ಸೆಳೆದಿದೆ.