ಹಾವೇರಿ: ದೀಪಾವಳಿ (Deepavali Festival) ಹಬ್ಬದ ಅಂಗವಾಗಿ ಹಾವೇರಿ ಜಿಲ್ಲೆಯ (Haveri news) ನಾನಾ ಕಡೆ ಅ.22ರಂದು ಏರ್ಪಡಿಸಲಾಗಿದ್ದ ಹೋರಿ ಹಬ್ಬದಲ್ಲಿ ಕೊಬ್ಬರಿ ಹೋರಿಗಳ ತಿವಿತಕ್ಕೆ ಮೂವರು ದುರ್ಮರಣ ಹೊಂದಿದ್ದಾರೆ. ಜಿಲ್ಲೆಯ ವಿವಿಧೆಡೆ ನಡೆದ ಕೊಬ್ಬರಿ ಹೋರಿ ಓಟದ ಸ್ಪರ್ಧೆಯ ವೇಳೆ ಭಾರೀ ಪ್ರಮಾಣದಲ್ಲಿ ಅನಾಹುತಗಳು ನಡೆದಿದ್ದು, ಒಂದೇ ದಿನ ಮೂವರು ಉಸಿರು ಚೆಲ್ಲಿರುವ ಘಟನೆಗಳು ನಡೆದಿವೆ.
ಹಾವೇರಿ ನಗರದ ದಾನೇಶ್ವರಿ ನಗರದ ನಿವಾಸಿ, ನಿವೃತ್ತ ಹೆಸ್ಕಾಂ ನೌಕರ ಚಂದ್ರಶೇಖರ್ ಕೋಡಿಹಳ್ಳಿ (70) ಎನ್ನುವವರು ಹಳೆ ಪಿ.ಬಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೊಬ್ಬರಿ ಹೋರಿ ಹಾಯ್ದು ಮೃತಪಟ್ಟಿದ್ದಾರೆ. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿಯಿಂದ ಈ ಅವಘಡ ನಡೆದಿದೆ.
ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ ಸಂದರ್ಭ ಎತ್ತುಗಳನ್ನು ಸಾರ್ವಜನಿಕವಾಗಿ ಮರವಣಿಗೆ ಮಾಡುವ ಕಾರ್ಯಕ್ರಮದಲ್ಲಿ ಒಂದು ಎತ್ತು ಬೆದರಿ ಓಡಿಬಂದು ತಿವಿದ ಪರಿಣಾಮ ಘನಿಸಾಬ ಮಹಮ್ಮದ ಹುಸೇನ ಬಂಕಾಪೂರ (75) ಎಂಬವರು ಮೃತಪಟ್ಟಿದ್ದಾರೆ. ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಘನಿಸಾಬ ಅವರ ಕುತ್ತಿಗೆಗೆ ಮತ್ತು ಎದೆಗೆ ಎತ್ತು ಕೊಂಬಿನಿಂದ ತಿವಿದು ಗಾಯಗೊಳಿಸಿದೆ. ಚಿಕಿತ್ಸೆಗಾಗಿ ಹಾವೇರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ದಾರಿಯಲ್ಲೇ ಮರಣ ಹೊಂದಿದರು.
ಇದನ್ನೂ ಓದಿ: Viral Video: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತಿ ಎಸೆದ ಹೋರಿ; ಶಾಕಿಂಗ್ ವಿಡಿಯೊ ವೈರಲ್
ಮತ್ತೊಂದು ಘಟನೆಯಲ್ಲಿ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ಭರತ ರಾಮಪ್ಪ ಹಿಂಗಮೇರಿ (24) ಎನ್ನುವ ಯುವಕ ಹೋರಿ ತಿವಿದು ಮೃತಪಟ್ಟಿದ್ದಾರೆ. ಬುಧವಾರ ಸಾಯಂಕಾಲ ತಿಳವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಕಾರ್ಯಕ್ರಮವನ್ನು ನೋಡಲು ಹೋಗಿದ್ದಾಗ, ತಿಳವಳ್ಳಿ ಗ್ರಾಮದ ದುರ್ಗಾಂಬಾ ರೆಸ್ಟೋರೆಂಟ್ ಬಳಿ ಒಂದು ಹೋರಿ ಓಡಿ ಬಂದು ಭರತ ಅವರ ಎದೆಗೆ ಗುದ್ದಿದೆ. ಕೂಡಲೇ ರಸ್ತೆಗೆ ಬಿದ್ದುದರಿಂದ ತಲೆಗೂ ಭಾರಿ ಗಾಯವಾಗಿದೆ. ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಚಿಕಿತ್ಸೆ ಫಲಿಸದೆ ರಾತ್ರಿ 8 ಘಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ.
ಇದಲ್ಲದೆ, ಹೋರಿ ಓಟದ ವೇಳೆ ಇನ್ನೂ ಇಬ್ಬರಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಪ್ರಕರಣ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.