ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Haveri News: ಹಾವೇರಿ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ; ಹಲವು ಕಡೆ ಜಾತ್ರಾ ಮಹೋತ್ಸವ

ಹಾವೇರಿ ಜಿಲ್ಲಾದ್ಯಂತ ಉತ್ತರಾಯಣದ ಆರಂಭ ದಿನವಾದ ಮಕರ ಸಂಕ್ರಾಂತಿ ಹಬ್ಬ ಬುಧವಾರ ಸಡಗರ ಸಂಭ್ರಮ ನಡೆಯುತ್ತಿದೆ. ಹಲವು ಕಡೆ ಬಾರಿ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಜಿಲ್ಲೆಯ ಜನರ ಸಂತಸ ಇಮ್ಮಡಿಗೊಂಡಿದೆ. ಈ ಕುರಿತ ವಿವರ ಇಲ್ಲಿದೆ.

ಹಾವೇರಿ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ

ಹಾವೇರಿ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. -

Profile
Siddalinga Swamy Jan 14, 2026 8:38 PM

ಹಾವೇರಿ, ಜ.14: ಉತ್ತರಾಯಣದ ಆರಂಭ ದಿನವಾದ ಬುಧವಾರ ಜಿಲ್ಲೆಯಾದ್ಯಂತ (Haveri News) ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಹಲವು ಕಡೆ ಜಾತ್ರಾ ಮಹೋತ್ಸವ ಜರುಗುತ್ತಿದ್ದು, ಜಿಲ್ಲೆಯ ಜನರ ಸಂತಸ ಇಮ್ಮಡಿಗೊಂಡಿದೆ. ಸಂಕ್ರಾಂತಿ ಹಬ್ಬವು ಸಮೃದ್ಧಿಯ ಸಂಕೇತ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದಾಗಿದೆ.

ಉತ್ತರಾಯಣ ಪುಣ್ಯ ಕಾಲ

ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 13 ಅಥವಾ 14 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಉತ್ತರಾಯಣವು ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭ ಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

ಕೃಷಿ ಪ್ರಧಾನ ಬಯಲು ಸೀಮೆಯ ಹಾವೇರಿ ಜಿಲ್ಲೆಯಲ್ಲಿ ಹಲವು ಕಡೆ ಅದ್ಧೂರಿ ಜಾತ್ರಾಮಹೋತ್ಸವ ನಡೆಯುತ್ತವೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಪ್ರಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ತುಂಗಭದ್ರಾ, ವರದಾ, ಧರ್ಮಾ, ಕುಮದ್ವತಿ ನದಿ ಸೇರಿದಂತೆ ಹಲವು ಹಳ್ಳ- ಕೊಳ್ಳಗಳು ಹರಿಯುತ್ತವೆ. ಜಿಲ್ಲೆಯ ತುಂಗಭದ್ರಾ ನದಿ ದಡದಲ್ಲಿರುವ ಸುಕ್ಷೇತ್ರ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರೆ, ಕೆಂಗೊಂಡ ಜಾತ್ರೆ, ವರದಾ ನದಿಯ ಕೂಡಲ ಜಾತ್ರೆ, ಧರ್ಮಾ ನದಿಯ ಪಕ್ಕದ ಮಂತಗಿ, ಹಾನಗಲ್ಲ ನಗರ ಸೇರಿದಂತೆ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಅದ್ದೂರಿ ಜಾತ್ರಾಮಹೋತ್ಸವ ರಥೋತ್ಸವ ನಡೆಯಲಿವೆ.

ಮಕರ ಸಂಕ್ರಾಂತಿ ಆಚರಣೆಯ ಹಿನ್ನಲೆ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ, ಅದ್ಧೂರಿ ರಥೋತ್ಸವ, ಸಾಂಸ್ಕೃತಿಕ ಸಮಾರಂಭ ನಡೆಯುತ್ತವೆ.‌

Haveri News: ಯುವಕರು ಕಾಯಕದ ಕಡೆ ಮುಖ‌ ಮಾಡಿದರೆ ನಾಯಕರಾಗಲು ಸಾಧ್ಯ: ಡಾ.ಮಹಾಂತಪ್ರಭು ಸ್ವಾಮೀಜಿ

ಮಕರ ಸಂಕ್ರಾಂತಿ ದಿನ ಎಳ್ಳು – ಬೆಲ್ಲ

ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇದನ್ನು ತಿಲ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಮಕರ ಸಂಕ್ರಾಂತಿಯ ದಿನ ಬೆಲ್ಲ, ಎಳ್ಳು ತಿನ್ನುವುದಲ್ಲದೇ, ನೀರಿನಲ್ಲಿ ಎಳ್ಳು ಸೇರಿಸಿ ಸ್ನಾನ ಮಾಡುತ್ತಾರೆ. ಈ ದಿನ ಎಳ್ಳು - ಬೆಲ್ಲವನ್ನು ಪರಸ್ಪರ ಹಂಚುವ ಮೂಲಕ ಹಬ್ಬದ ಖುಷಿಯನ್ನು ಸಂಭ್ರಮಿಸಲಾಗುತ್ತದೆ.