ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

8 ವರ್ಷಗಳಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ, ಪಕ್ಷದ ನಿರ್ಧಾರಕ್ಕೆ ಬದ್ಧ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಂಜುನಾಥ ನೀಲಗುಂದ

ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಪಕ್ಷದ ಹಿರಿಯರ ಮನಸ್ಸು ಗೆದ್ದು, ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುವ ಉದ್ದೇಶ ಹೊಂದಿದ್ದೇನೆ. ಕಬ್ಬೂರ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಮುಂದುವರಿದಿದೆ ಎಂದು ಕಬ್ಬೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನ ಆಕಾಂಕ್ಷಿ ಮಂಜುನಾಥ ನೀಲಗುಂದ ಹೇಳಿದ್ದಾರೆ.

ಹಾವೇರಿ, ಅ.22: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆ ಗರಿಗೆದರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿದ್ದು, ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರವೂ ಜೋರಾಗಿದೆ. ಈ ನಡುವೆ ಹಾವೇರಿ ತಾಲೂಕಿನ ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಕಬ್ಬೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ಮಂಜುನಾಥ ನೀಲಗುಂದ ಅವರು ತಮ್ಮ ವಿರುದ್ಧ ವ್ಯಕ್ತವಾಗಿರುವ ಅಸಮಾಧಾನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಮಂಜುನಾಥ ನೀಲಗುಂದ, ಹಾನಗಲ್ಲ ಮತ್ತು ಹಾವೇರಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಳೆದ ಎಂಟು ವರ್ಷಗಳಿಂದ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹಾನಗಲ್ ವಿಧಾನಸಭಾ ಉಪಚುನಾವಣೆ, ಸಾರ್ವತ್ರಿಕ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಕಬ್ಬೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಬಲ ಆಕಾಂಕ್ಷಿಯಾಗಿರುವುದು ನಿಜ ಎಂದು ಹೇಳಿದ್ದಾರೆ.

ತಮ್ಮ ಹೆಸರನ್ನು ಉಲ್ಲೇಖಿಸಿ ಹಿರಿಯ ಶಾಸಕ ಬಸವರಾಜ ಶಿವಣ್ಣನವರ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ಬೇಸರ ತಂದಿದೆ ಎಂದು ಹೇಳಿರುವ ಅವರು, ‘ಬಸವರಾಜ ಶಿವಣ್ಣನವರ ಅವರು ನನಗೆ ಹಿರಿಯರು, ತಂದೆಯ ಸಮಾನ. ಅವರ ಮಾರ್ಗದರ್ಶನವನ್ನು ಗೌರವಿಸುತ್ತೇನೆ. ನನ್ನಿಂದ ತಪ್ಪಾಗಿದ್ದರೆ ಬೈದು ಬುದ್ಧಿ ಹೇಳಲಿ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆʼ ಎಂದು ತಿಳಿಸಿದ್ದಾರೆ.

ಕಬ್ಬೂರು ಜಿಪಂ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಹರಿದಾಡುತ್ತಿರುವ ಮಾಹಿತಿ ಸುಳ್ಳು: ಶಾಸಕ ಬಸವರಾಜ ಶಿವಣ್ಣನವರ ಸ್ಪಷ್ಟನೆ

ʼಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಪಕ್ಷದ ಹಿರಿಯರ ಮನಸ್ಸು ಗೆದ್ದು, ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುವ ಉದ್ದೇಶ ಹೊಂದಿದ್ದೇನೆ. ಕಬ್ಬೂರ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಮುಂದುವರಿದಿದೆʼ ಎಂದು ಮಂಜುನಾಥ ನೀಲಗುಂದ ಸ್ಪಷ್ಟಪಡಿಸಿದ್ದಾರೆ.