ಹಾವೇರಿ, ಅ.21: ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳು ಸತ್ಯಕ್ಕೆ ದೂರವಾಗಿದ್ದು, ಪಕ್ಷದ ಟಿಕೆಟ್ ನೀಡುವ ಕುರಿತು ಯಾರಿಗೂ ಅಧಿಕೃತ ಭರವಸೆ ನೀಡಿಲ್ಲ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಸ್ಪಷ್ಟಪಡಿಸಿದ್ದಾರೆ.
ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಮಂಜುನಾಥ ನೀಲಗುಂದ ಅವರು ತಮ್ಮನ್ನು ಪ್ರಬಲ ಅಭ್ಯರ್ಥಿಯೆಂದು ಬಿಂಬಿಸಿಕೊಂಡು, ಶಾಸಕರ ಭಾವಚಿತ್ರ ಬಳಸಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.
ಮಂಜುನಾಥ ನೀಲಗುಂದ ಅವರಿಗೆ ಕಬ್ಬೂರು ಜಿಪಂ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಕುರಿತು ತಾವು ಅಥವಾ ಪಕ್ಷದ ಹೈಕಮಾಂಡ್ ಯಾವುದೇ ಅಧಿಕೃತ ಭರವಸೆ, ಬೆಂಬಲ ಅಥವಾ ಪ್ರೋತ್ಸಾಹ ನೀಡಿಲ್ಲ. ಆದರೂ ಟಿಕೆಟ್ ಖಚಿತವಾಗಿದೆ ಎಂಬ ರೀತಿಯಲ್ಲಿ ಪ್ರಚಾರ ಮಾಡುವುದು ಸರಿಯಲ್ಲ. ತಮ್ಮ ಭಾವಚಿತ್ರ ಬಳಸಿ ಇದೇ ರೀತಿ ಪೋಸ್ಟ್ಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪಕ್ಷದಲ್ಲಿ ಕಳೆದ 30ರಿಂದ 40 ವರ್ಷಗಳಿಂದ ತತ್ವ, ಸಿದ್ಧಾಂತ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸಿರುವ ಅನೇಕ ಹಿರಿಯ ಮತ್ತು ಅನುಭವಿ ಮುಖಂಡರಿದ್ದಾರೆ. ಅವರ ಪಕ್ಷನಿಷ್ಠೆ, ಸೇವೆ ಹಾಗೂ ಸಂಘಟನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಕಬ್ಬೂರು ಜಿಪಂ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಊಹಾಪೋಹಗಳಿಗೆ ಮತದಾರರು ಕಿವಿಗೊಡಬಾರದು. ಪಕ್ಷದ ಅಧಿಕೃತ ನಿರ್ಧಾರ ಪ್ರಕಟವಾಗುವವರೆಗೆ ಸಂಯಮ ಕಾಪಾಡಬೇಕು. ವರಿಷ್ಠರ ಅಂತಿಮ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಪಕ್ಷದ ಶಿಸ್ತು, ಒಗ್ಗಟ್ಟು ಹಾಗೂ ಸಂಘಟನೆಯ ಗೌರವ ಉಳಿಸಲು ಸಹಕರಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದ್ದಾರೆ.