ಹಾವೇರಿ, ಜು.7: ಹಾವೇರಿ ಜಿಲ್ಲೆಯ (Haveri News) ಬ್ಯಾಡಗಿ, ಹಾನಗಲ್, ಸವಣೂರು, ಶಿಗ್ಗಾಂವಿ, ರಾಣೆಬೆನ್ನೂರು ಹಾಗೂ ಹಿರೇಕೆರೂರು ಸೇರಿದಂತೆ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿದ್ದು, ಅನ್ನದಾತರಲ್ಲಿ ಸಂತಸ ಮೂಡಿಸಿದೆ.
ಕಳೆದ ಕೆಲವು ವಾರಗಳಿಂದ ಮಳೆಯ ಕೊರತೆಯಿಂದ ಕಂಗಾಲಾಗಿದ್ದ ಹಾವೇರಿ ಜಿಲ್ಲೆಯ ರೈತರಿಗೆ ಇದೀಗ ಪ್ರಕೃತಿಯೇ ವರದಾನ ನೀಡಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿದ್ದು, ಅನ್ನದಾತರ ಮುಖದಲ್ಲಿ ಸಂತಸದ ನಗು ಮೂಡಿಸಿದೆ. ಜಿಲ್ಲೆಯ ಹಾವೇರಿ, ಬ್ಯಾಡಗಿ, ಹಾನಗಲ್, ಸವಣೂರು, ಶಿಗ್ಗಾಂವಿ, ರಾಣೆಬೆನ್ನೂರು ಹಾಗೂ ಹಿರೇಕೆರೂರು ಸೇರಿದಂತೆ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ನೀರಿನಿಂದ ತುಂಬಲಾರಂಭಿಸಿದ್ದು, ಅಂತರ್ಜಲ ಮಟ್ಟವೂ ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಈಗ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದು, ಜೋಳ, ಮೆಕ್ಕೆಜೋಳ, ಹತ್ತಿ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ವೇಗ ಸಿಕ್ಕಿದೆ. ಕಳೆದ ಕೆಲ ದಿನಗಳವರೆಗೆ ಬರದ ಆತಂಕದಲ್ಲಿದ್ದ ರೈತ ಸಮುದಾಯಕ್ಕೆ ಈ ಮಳೆ ಹೊಸ ಭರವಸೆಯನ್ನು ಮೂಡಿಸಿದೆ. ಆದರೆ, ನಿರಂತರ ಮಳೆಯಿಂದ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ನಗರ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಸ್ವಲ್ಪ ಮಟ್ಟಿನ ತೊಂದರೆ ಉಂಟಾಗಿದೆ. ಆದರೂ ಕೃಷಿ ದೃಷ್ಟಿಯಿಂದ ಈ ಮಳೆ ಅತ್ಯಂತ ಅನುಕೂಲಕರವಾಗಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮಳೆ ಇನ್ನೂ ಕೆಲವು ದಿನ ಮುಂದುವರಿದರೆ ಈ ವರ್ಷದ ಕೃಷಿ ಉತ್ತಮವಾಗಲಿದೆ. ಬೆಳೆಗಳು ಚೆನ್ನಾಗಿ ಬೆಳೆಯುವ ವಿಶ್ವಾಸ ಮೂಡಿದೆ ಎಂದು ಹಲವು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಬರದ ಭೀತಿಯಿಂದ ಆತಂಕಗೊಂಡಿದ್ದ ಹಾವೇರಿ ಜಿಲ್ಲೆಯ ರೈತರಿಗೆ ಇದೀಗ ಮಳೆರಾಯ ಆಶಾಕಿರಣವಾಗಿದ್ದಾನೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಮಳೆ ಮುಂದುವರಿದರೆ ಜಿಲ್ಲೆಯ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡು ಉತ್ತಮ ಫಸಲು ಪಡೆಯುವ ನಿರೀಕ್ಷೆ ಹೆಚ್ಚಾಗಿದೆ.