ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂಬತ್ತು ತಿಂಗಳಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

Haveri News: ಹಾವೇರಿ ಶಹರದ ಬಸವೇಶ್ವರ ನಗರದಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಭೂಮಿ ಪೂಜೆ ನೆರವೇರಿದರು. ಬಳಿಕ ಮಾತನಾಡಿದ ಅವರು, ಲೋಕಾಯುಕ್ತ ಕಚೇರಿಗಾಗಿ ಸರ್ಕಾರದಿಂದ ನಿವೇಶನ ಒದಗಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಆದೇಶ ಹಾಗೂ ಕಾರ್ಯಾದೇಶವೂ ಆಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗದಂತೆ ತಕ್ಷಣ ಆರಂಭಿಸುವ ಉದ್ದೇಶದಿಂದ ಅಡಿಗಲ್ಲು ಹಾಕಲಾಗಿದೆ ಎಂದು ಹೇಳಿದ್ದಾರೆ.

ಹಾವೇರಿಯಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್.

ಹಾವೇರಿ, ಆ.24: ಜಿಲ್ಲೆಯಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಇಂದು ಅಡಿಗಲ್ಲು ಹಾಕಲಾಗಿದ್ದು, 4.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಕಟ್ಟಡವನ್ನು ಒಂಬತ್ತು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದರು. ಸೋಮವಾರ ಹಾವೇರಿ (Haveri News) ಶಹರದ ಬಸವೇಶ್ವರ ನಗರದಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಲೋಕಾಯುಕ್ತ ಕಚೇರಿಗಾಗಿ ಸರ್ಕಾರದಿಂದ ನಿವೇಶನ ಒದಗಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಆದೇಶ ಹಾಗೂ ಕಾರ್ಯಾದೇಶವೂ ಆಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗದಂತೆ ತಕ್ಷಣ ಆರಂಭಿಸುವ ಉದ್ದೇಶದಿಂದ ಅಡಿಗಲ್ಲು ಹಾಕಲಾಗಿದೆ ಎಂದರು.

ಕಾಮಗಾರಿಯನ್ನು ಒಂಬತ್ತುತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಲೋಪದ ವಿರುದ್ಧ ಕಠಿಣ ಕ್ರಮ

ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಆಗುವ ಲೋಪಗಳನ್ನು ಪತ್ತೆ ಹಚ್ಚುವುದು, ಲೋಪಕ್ಕೆ ಕಾರಣರಾದವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಗೆ ಆಗುವ ಅನ್ಯಾಯವನ್ನು ಪರಿಹರಿಸುವುದು ಲೋಕಾಯುಕ್ತ ಸಂಸ್ಥೆಯ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು.

ಎಲ್ಲೆಲ್ಲಿ ಆಡಳಿತಾತ್ಮಕ ಲೋಪಗಳು ನಡೆಯುತ್ತವೆಯೋ, ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆಯೋ ಅಂತಹ ಪ್ರಕರಣಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರುವ ಕಾರ್ಯವನ್ನು ಲೋಕಾಯುಕ್ತ ಸಂಸ್ಥೆ ನಿರಂತರವಾಗಿ ನಡೆಸುತ್ತಿದೆ. ರಸ್ತೆ, ಕಟ್ಟಡ ಸೇರಿದಂತೆ ಸರ್ಕಾರಿ ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ ಕಂಡುಬಂದರೆ ಪರಿಶೀಲನೆ ಹಾಗೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಲೋಕಾಯುಕ್ತ ಸಂಸ್ಥೆಯಲ್ಲಿರುವ ಎಂಜಿನಿಯರಿಂಗ್ ವಿಭಾಗದ ಮೂಲಕ ಸರ್ಕಾರಿ ಕಟ್ಟಡಗಳು ಹಾಗೂ ಇತರೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಮುಖ್ಯ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್ ಸೇರಿದಂತೆ ತಜ್ಞರ ತಂಡವನ್ನು ನಿಯೋಜಿಸಿ ಕಾಮಗಾರಿಯಲ್ಲಿನ ಲೋಪಗಳನ್ನು ಪತ್ತೆಹಚ್ಚಿ ವರದಿ ಪಡೆಯಲಾಗುತ್ತದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

38 ರಿಂದ 40 ಸಾವಿರ ಪ್ರಕರಣಗಳು ಬಾಕಿ

ಲೋಕಾಯುಕ್ತ ಸಂಸ್ಥೆಯಲ್ಲಿ ವಿವಿಧ ದೂರುಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಸುಮಾರು 38 ರಿಂದ 40 ಸಾವಿರ ಪ್ರಕರಣಗಳು ಬಾಕಿ ಇವೆ. ಸುಮಾರು 35 ರಿಂದ 36 ಮಂದಿ ನ್ಯಾಯಾಂಗ ಅಧಿಕಾರಿಗಳು ಹಾಗೂ ನೂರಾರು ಪೊಲೀಸ್ ಅಧಿಕಾರಿಗಳು ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿಯೂ ಲೋಕಾಯುಕ್ತ ಎಸ್‌ಪಿ, ಡಿವೈಎಸ್‌ಪಿ ಹಾಗೂ ಸಿಬ್ಬಂದಿ ಮೂಲಕ ಪ್ರಕರಣಗಳ ತನಿಖೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸುವುದರ ಜತೆಗೆ ದೋಷಪೂರಿತ ಕಾಮಗಾರಿಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.

ಮಾದರಿ ಕಟ್ಟಡವಾಗಲಿ

ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಲೋಕಾಯುಕ್ತ ಕಚೇರಿ ಕಟ್ಟಡವು ಜಿಲ್ಲೆಯ ಅತ್ಯುತ್ತಮ ಸರ್ಕಾರಿ ಕಟ್ಟಡಗಳಲ್ಲಿ ಒಂದಾಗಿ, ಇತರರಿಗೆ ಮಾದರಿಯಾಗಬೇಕು. ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಯನ್ನೂ ಲೋಕಾಯುಕ್ತ ಸಂಸ್ಥೆ ಪರಿಶೀಲಿಸಲಿದೆ ಎಂದು ತಿಳಿಸಿದರು.

ಸಿಇಟಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA; ಫಲಿತಾಂಶ ಹೀಗೆ ಚೆಕ್‌ ಮಾಡಿ

ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತರಾದ ಕೆ.ಎನ್. ಪಣೀಂದ್ರ ಹಾಗೂ ಬಿ. ವೀರಪ್ಪ, ಅಪರ ಪೊಲೀಸ್ ಮಹಾನಿರ್ದೇಶಕ ಮನೀಶ್ ಖರ್ಬಿಕರ್, ದಾವಣಗೆರೆ ಲೋಕಾಯುಕ್ತ ಎಸ್‌ಪಿ ಕೌಲಾಪೂರೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ್ ಕುಮಾರ್, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.