ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kings Bazaar: ಹೆಚ್ಚಿನ ಲಾಭದ ಆಮಿಷ ಒಡ್ಡಿ ಅಕ್ರಮವಾಗಿ ಹಣ ಸಂಗ್ರಹ; ಹಾವೇರಿಯ ಕಿಂಗ್ಸ್ ಬಜಾರ್ ಸಂಸ್ಥೆಗೆ ನೋಟಿಸ್‌ ಜಾರಿ

ಕಿಂಗ್ಸ್‌ ಬಜಾರ್‌ಗೆ ಸೇರಿದ ಸ್ಥಳಗಳ ಮೇಲೆ ದಾಳಿ ವೇಳೆ 2 ಕೋಟಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಇನ್ನು ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ವಿಚಾರಣಾಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.

ಹಾವೇರಿ: ಹೆಚ್ಚಿನ ಲಾಭದ ಆಮಿಷ ಒಡ್ಡಿ ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಭಾವಿ ಉದ್ಯಮಿ ಆನಂದ ಲಮಾಣಿ ಅವರಿಗೆ ಸೇರಿದ್ದು ಎನ್ನಲಾದ ‘ಕಿಂಗ್ಸ್ ಬಜಾರ್ ಸಂಸ್ಥೆ (Kings Bazaar) ಮೇಲೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹಣಕಾಸು ವ್ಯವಹಾರದ ಕುರಿತು ದಾಖಲೆ ಸಲ್ಲಿಸಲು ನೋಟಿಸ್‌ ನೀಡಲಾಗಿದೆ.

ಹಾವೇರಿ ಎಸಿ ಕಲ್ಯಾಣಿ ಕಾಂಬಳೆ ಹಾಗೂ ರಟ್ಟಿಹಳ್ಳಿ ತಹಸೀಲ್ದಾರ್ ಶ್ವೇತಾ ಅಮರಾವತಿ ನೇತೃತ್ವದಲ್ಲಿ ರಟ್ಟಿಹಳ್ಳಿ ಸೇರಿ ಜಿಲ್ಲೆಯ ವಿವಿಧೆಡೆ ಕಿಂಗ್ಸ್ ಬಜಾರ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ದಾಳಿ ವೇಳೆ 2 ಕೋಟಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ವಸ್ತುಗಳಿಗೆ ವಾರಂಟಿ, ಗ್ಯಾರಂಟಿ ಇರದಿರುವುದು, ಶೇ.50 ಡಿಸ್ಕೌಂಟ್‌ ನೀಡಿ ವಸ್ತುಗಳ ಮಾರಾಟ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇನ್ನು ಕಂಪನಿಗೆ ಸದಸ್ಯರಾದರೆ ಹಣ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಬೆಲೆಬಾಳುವ ವಸ್ತು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದರೆ ಪ್ರತಿದಿನ ಕಮಿಷನ್ ಪಡೆಯಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಹಾವೇರಿ ಜಿಲ್ಲಾಧಿಕಾರಿಗಳು ಕಿಂಗ್ಸ್‌ ಬಜಾರ್‌ ಸಂಸ್ಥೆಯ ಹಣಕಾಸು ಅವ್ಯವಹಾರ ಕುರಿತು ಪ್ರಾಥಮಿಕ ತನಿಖೆ ನಡೆಸಲು ಉಪವಿಭಾಗಾಧಿಕಾರಿ ಹಾಗೂ ಹಾವೇರಿ ಉಪವಿಭಾಗೀಯ ದಂಡಾಧಿಕಾರಿ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಆದೇಶಿಸಿದ್ದಾರೆ. ಆದ್ದರಿಂದ ಸಂಸ್ಥೆಯ ವಿಚಾರಣೆ ನಡೆಸಲು ಅಗತ್ಯ ದಾಖಲೆಗಳನ್ನು ಕೂಡಲೇ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಕಿಂಗ್ಸ್‌ ಬಜಾರ್‌ ಸಂಸ್ಥೆಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ನೋಟಿಸ್‌ನಲ್ಲಿ ಕೇಳಿರುವ ದಾಖಲೆಗಳು:

  1. ಸಂಸ್ಥೆಯ ಕಾನೂನು ಬದ್ಧ ಹೆಸರು ಮತ್ತು ವಿಳಾಸ ಮಾಹಿತಿ.
  2. ಸಂಸ್ಥೆಯನ್ನು ಯಾವ ಕಾನೂನಿನ ಅಡಿಯಲ್ಲಿ ನೋಂದಾಯಿಸಿದ ವಿವರ ಹಾಗೂ ಜಿಎಸ್‌ಟಿ, ಟ್ರೇಡ್ ಲೈಸೆನ್ಸ್‌ ದಾಖಲೆಗಳನ್ನು ಸಲ್ಲಿಸುವುದು.
  3. ಸಂಸ್ಥೆಯ ವ್ಯವಹಾರಗಳನ್ನು RBI/SEBI ನಿಯಮಾವಳಿಗಳ ಪ್ರಕಾರ ನಡೆಸಲಾಗುತ್ತಿದೆಯ ಎಂಬ ವಿವರ.
  4. ಸಂಸ್ಥೆಯು ಬಳಸುವ ಎಲ್ಲ ಬ್ಯಾಂಕ್ ಖಾತೆಗಳ ವಿವರಗಳನ್ನು ಹಾಗೂ ಬ್ಯಾಂಕ್ ಖಾತೆಯ ಸಂಪೂರ್ಣ ವ್ಯವಹಾರಗಳ ವಿವರ.
  5. ಸಂಸ್ಥೆಯು ಪ್ರಾರಂಭವಾದಾಗಿನಿಂದ ಆದಾಯ ತೆರಿಗೆ ರಿಟನ್ಸ್ ಮತ್ತು ಆಡಿಟೆಡ್ ವಿವರ.
  6. ಸಂಸ್ಥೆಯಲ್ಲಿ ಹೂಡಿಕೆ ಮಾಡಿದವರ ವಿವರ ಮತ್ತು ಹೂಡಿಕೆ ಮಾಡಿರುವ ಭೌತಿಕ ಮತ್ತು Electronic Copy.
  7. ಸಂಸ್ಥೆಗೆ ಹೂಡಿಕೆದಾರರಿಂದ ಯಾವ ವಿಧಾನ ಮತ್ತು ರೂಪದಲ್ಲಿ ಹಣವನ್ನು ಪಡೆಯಲಾಗುತ್ತದೆ ಎಂಬುದರ ವಿವರ,
  8. ಹೂಡಿಕೆದಾರರಿಂದ ಸಂಗ್ರಹಿಸಿದ ಮೊತ್ತವನ್ನು ಸಂಸ್ಥೆಯಿಂದ ವಿವಿಧ ಕಡೆ ಹೂಡಿಕೆ ಮಾಡಿದ್ದೀರಾ?, ಒಂದು ವೇಳೆ ಹೂಡಿಕೆ ಮಾಡಿದ್ದರೆ ಹೂಡಿಕೆ ಸಂಸ್ಥೆಯ ನೋಂದಾಯಿತ ಪ್ರತಿ, ಬ್ಯಾಂಕಿನ ಸಂಪೂರ್ಣ ವಿವರ ಅಡಿಟೆಡ್ ವಿವರ.
  9. ಹೂಡಿಕೆದಾರರ ಹಣವನ್ನು ಭೌತಿಕವಾಗಿ, ಷೇರು ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್‌ನಲ್ಲಿ ಹಾಗೂ ಇತರೇ ವಿಧಾನದಲ್ಲಿ ವಿನಿಯೋಗಿಸಿದ್ದರೆ ಅದರ ಭೌತಿಕ ಪ್ರತಿ ಒದಗಿಸುವುದು.