ಹಾವೇರಿ, ಜ. 28: ವಿವಾಹವಾಗಿ 3 ವರ್ಷವಾದರೂ ಪತಿಯ ಧನದಾಹ ತೀರಿಲ್ಲ. ವರದಕ್ಷಿಣೆ ತರುವಂತೆ ಪತ್ನಿ ಮಾತ್ರವಲ್ಲಆಕೆಯ ಮನೆಯವರ ಮೇಲೂ ಹಲ್ಲೆ ನಡೆಸಿದ ಪತಿ, ಆತನ ಮನೆಯವರು ತಲೆಮರೆಸಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ (Haveri News). ವರದಕ್ಷಿಣೆ ತರುವಂತೆ ಪತಿ ಸೇರಿದಂತೆ ಕುಟುಂಬದವರೆಲ್ಲ ಪತ್ನಿಗೆ ನಿರಂತರ ಕಿರುಕುಳ, ಶೋಷಣೆ, ದೈಹಿಕ ಹಿಂಸೆ ನೀಡಿದ್ದಾರೆ. ಇದರಿಂದ ಬೇಸತ್ತು ತವರಿಗೆ ಹೋದರೂ ಬೆನ್ನು ಬಿಡದ ಪತಿ ಮತ್ತು ಆತನ ಮನೆಯವರು ಜನವರಿ 24ರಂದು ಏಕಾಏಕಿ ಆಕೆಯ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ, ಸದ್ಯ ತಲೆಮರೆಸಿಕೊಂಡಿದ್ದಾರೆ.
ಹಾನಗಲ್ಲ ತಾಲೂಕಿನ ಮಂತಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತೆ ಶಬಜಾನಬಾನು ತಂದೆ ಇಸ್ಮಾಯಿಲ್ ಸಾಬ್ ಬಳಿಗಾರ ಹಾನಗಲ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಉರ್ದು ಶಾಲೆ ಶಿಕ್ಷಕನಿಗೆ ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ
ಮಂತಗಿ ಗ್ರಾಮದ ಶಬಜಾನಬಾನುವನ್ನು ಅದೇ ಗ್ರಾಮದ ಅಬೂಬಕ್ಕರ್ ಬಸೀರಸಾಬ ಪಾಳಾನಿಗೆ 3 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ ಬೆನ್ನಲ್ಲೇ ಅಬೂಬಕ್ಕರ್ ಹಾಗೂ ಆತನ ತಂದೆ, ಸಹೋದರಿಯರು, ಸಹೋದರರು ವರದಕ್ಷಿಣೆ ತರುವಂತೆ ಪದೇ ಪದೆ ಶಬಜಾನಬಾನು ಮೇಲೆ ಹಲ್ಲೆ ನಡೆಸುತ್ತಿದ್ದರು. ಅಬೂಬಕ್ಕರ-ಶಬಜಾನಬಾನು ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಮತ್ತೊಂದು ಮಗುವಿನ ಜನ್ಮ ನೀಡುವ ಹೊತ್ತಿನಲ್ಲಿ ಆಕೆಯ ಹೊಟ್ಟೆಗೆ ತೀವ್ರವಾಗಿ ಹೊಡೆದ ಕಾರಣದಿಂದ ಅಬಾರ್ಷನ್ ಕೂಡ ಆಗಿತ್ತು. ಆದಾದ ಬಳಿಕ ಶಬಜಾನಬಾನು ಪತಿಯ ಮನೆ ತೊರೆದು ತವರು ಮನೆಗೆ ಆಗಮಿಸಿದ್ದಳು.
ಇಷ್ಟಕ್ಕೆ ಇವರ ಕ್ರೌರ್ಯ ನಿಂತಿಲ್ಲ. ಜನವರಿ 24ರಂದು ಅಬೂಬಕ್ಕರ್ ಕುಟುಂಬ ಸಮೇತ ಶಬಜಾನಬಾನು ತವರು ಮನೆಗೆ ನುಗ್ಗಿ ಆಕೆಯ ತಾಯಿ ಶಲಿಮಾಬಾನು, ಸಹೋದರಿ ಶಬ್ರಿನಾಬಾನು, ಸಹೋದರ ಶಪೀವುಲ್ಲಾ ಮೇಲೆ ದೊಣ್ಣೆಯಿಂದ ಮನ ಬಂದಂತೆ ಬಡಿದು ಹಲ್ಲೆ ನಡೆಸಿದ್ದಾನೆ. ಈ ಪೈಕಿ ಒಬ್ಬರ ಕೈ ಮುರಿದಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರಿಗೆ ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ ಹಾಗೂ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಇದೀಗ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಬೂಬಕ್ಕರ್ ಮತ್ತು ಮನೆಯವರು ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ
ಪತ್ನಿಯ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳಾದ ಅಬೂಬಕ್ಕರ್ ಬಸೀರಸಾಬ ಪಾಳಾ, ಇಮಾಮಸಾಬ ಮಕಬೂಲಸಾಬ ಪಾಳಾ, ದಸ್ತಗಿರ ಪಾಳಾ, ಬಸೀರ ಸಾಬ ಪಾಳಾ, ತಾಯೇರಾ ಸೌದೆಗಾರ, ಪೈರೋಜಾ ನೂರಿ, ರುಕ್ಸಾನಾ ಸಾಣಿ, ಅನೀಸಾ ಮುನ್ನಸುಬದಾರ ಊರು ಬಿಟ್ಟು ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.