ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ; ಭಯದಿಂದ ಹೊರಗೆ ಓಡಿ ಬಂದ ಜನ

Bomb threat: ಹಾವೇರಿ ಕೋರ್ಟ್‌ ಮಾತ್ರವಲ್ಲದೆ ರಾಜ್ಯದ ಹಲವು ಕೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಹೀಗಾಗಿ ನ್ಯಾಯಾಲಯಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಮಂಡ್ಯ, ಕೊಡಗು, ದಾವಣಗೆರೆ, ಧಾರವಾಡ ನ್ಯಾಯಾಲಯಕ್ಕೂ ಬಾಂಬ್‌ ಬೆದರಿಕೆ ಬಂದಿದೆ.

ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿ ಹಾವೇರಿ ಕೋರ್ಟ್‌ನಿಂದ ಜನ ಹೊರಬಂದಿರುವುದು.

ಹಾವೇರಿ: ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಸೋಮವಾರ ಬಾಂಬ್ ಬೆದರಿಕೆ (Bomb threat) ಸಂದೇಶ ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ಬೆದರಿಕೆ ವಿಚಾರ ಗೊತ್ತಾಗುತ್ತಲೇ ನ್ಯಾಯಾಧೀಶರು ಕಲಾಪವನ್ನು ಅರ್ಧಕ್ಕೆ ನಿಲ್ಲಿಸಿದ್ದು, ವಕೀಲರು, ಕಕ್ಷಿದಾರರು ಸೇರಿ ಎಲ್ಲರೂ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.

ಕೋರ್ಟ್‌ನ ಇಮೇಲ್‌ಗೆ ಬಾಂಬ್‌ ಬೆದರಿಕೆ ಸಂದೇಶ ಬಂದ ಮಾಹಿತಿ ತಿಳಿದು ಸ್ಥಳಕ್ಕೆ ಪೋಲಿಸರು, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಧಾರವಾಡ, ದಾವಣಗೆರೆ ಸೇರಿ ಹಲವು ಕೋರ್ಟ್‌ಗಳಿಗೂ ಬಾಂಬ್‌ ಬೆದರಿಕೆ

ಹಾವೇರಿ ಕೋರ್ಟ್‌ ಮಾತ್ರವಲ್ಲದೆ ರಾಜ್ಯದ ಹಲವು ಕೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಹೀಗಾಗಿ ನ್ಯಾಯಾಲಯಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಧಾರವಾಡ, ಮಂಡ್ಯ, ಕೊಡಗು, ದಾವಣಗೆರೆ ನ್ಯಾಯಾಲಯಕ್ಕೂ ಬಾಂಬ್‌ ಬೆದರಿಕೆ ಬಂದಿದೆ.

ಧಾರವಾಡ ಹೈಕೋರ್ಟ್ ಪೀಠಕ್ಕೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಬಾಂಬ್ ಸ್ಪೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿರುವ ಮಾಹಿತಿಯನ್ನು ಸಿಬ್ಬಂದಿಗಳು ಪೊಲೀಸರಿಗೆ ತಕ್ಷಣ ತಿಳಿಸಿದ್ದು, ಹೈಕೋರ್ಟ್ ಪೀಠದಿಂದ ವಕೀಲರು ಮತ್ತು ಸಿಬ್ಬಂದಿಗಳು ತಕ್ಷಣ ಹೊರಗಡೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದಾರೆ. ಒಂದು ತಿಂಗಳ ಹಿಂದೆ ಇದೇ ರೀತಿ ಸ್ಪೋಟಿಸುವುದಾಗಿ ಈ ಮೇಲ್ ಸಂದೇಶ ಬಂದಿತ್ತು.

ಅದೇ ರೀತಿ ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ಬಂದಿದೆ. RDX ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯಿಂದ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ತಮಿಳುನಾಡು ಮೂಲದ ವ್ಯಕ್ತಿಯಿಂದ ನ್ಯಾಯಾಧೀಶರಿಗೆ ಈ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 12:30ಕ್ಕೆ RDX ಮುಖಾಂತರ ಸ್ಫೋಟಿಸುವುದಾಗಿ ಕಳುಹಿಸಿದ್ದಾರೆ. ವಿಷಯ ತಿಳಿದು ಕೋರ್ಟ್ ಕಲಾಪವನ್ನು ಸಿಬ್ಬಂದಿಗಳು ಸ್ಥಗಿತಗೊಳಿಸಿ ಹೊರಬಂದಿದ್ದಾರೆ. ಮತ್ತು ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಇನ್ನು ಮಡಿಕೇರಿ ನ್ಯಾಯಾಲಯಕ್ಕೂ ಕೂಡ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನ್ಯಾಯಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶ ಬಂದಿದೆ. ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ಪತ್ತೆ ದಳ, ಭದ್ರತಾ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.

ಸ್ಪೀಕರ್ ಕೊಠಡಿಗೆ ನುಗ್ಗಿ ಬೆದರಿಕೆ ಹಾಕಿದ ಕಾಂಗ್ರೆಸ್‌ ಸಂಸದರು; ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ!

ಹಾಗೆಯೇ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯ ಹಾಗೂ ಮಂಡ್ಯ ಜಿಲ್ಲಾ ನ್ಯಾಯಾಧೀಶರ ಇ-ಮೇಲ್‌ಗೂ ಕೂಡ ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.