ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕುಸಿಯುತ್ತಿವೆ ರಟ್ಟಿಹಳ್ಳಿಯ ಕುಮದ್ವತಿ ನದಿ ದಡದಲ್ಲಿನ ಐತಿಹಾಸಿಕ ಕಲ್ಲಿನ ಮೆಟ್ಟಿಲುಗಳು

Kumudvathi River: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಜೀವನಾಡಿಯಾಗಿರುವ ಕುಮದ್ವತಿ ನದಿ (ಪಾಟಾಣಿಗಿ ಹೊಳೆ) ದಡದಲ್ಲಿನ ಐತಿಹಾಸಿಕ ಕಲ್ಲಿನ ಮೆಟ್ಟಿಲುಗಳು ಕುಸಿದು ಬೀಳುತ್ತಿವೆ. ನಿರ್ವಹಣೆಯ ಕೊರತೆ, ಕಾಲದ ಹೊಡೆತ ಮತ್ತು ನಿರ್ಲಕ್ಷ್ಯದಿಂದ ಮೆಟ್ಟಿಲುಗಳು ಸಂಪೂರ್ಣ ಶಿಥಿಲಗೊಂಡಿವೆ. ಈ ಕುರಿತ ಲೇಖನ ಇಲ್ಲಿದೆ.

ರಟ್ಟಿಹಳ್ಳಿಯ ಕುಮದ್ವತಿ ನದಿ ದಡದಲ್ಲಿನ ಕುಸಿದುಬಿದ್ದ ಕಲ್ಲಿನ ಮೆಟ್ಟಿಲುಗಳು.

ವರದಿ: ಮಲ್ಲೇಶ್ ಓಲೆಕಾರ್, ರಟ್ಟಿಹಳ್ಳಿ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಜೀವನಾಡಿಯಾಗಿರುವ ಕುಮದ್ವತಿ ನದಿ (ಪಾಟಾಣಿಗಿ ಹೊಳೆ) ದಡದಲ್ಲಿನ ಐತಿಹಾಸಿಕ ಕಲ್ಲಿನ ಮೆಟ್ಟಿಲುಗಳು ಕುಸಿದು ಬೀಳುತ್ತಿವೆ. ನಿರ್ವಹಣೆಯ ಕೊರತೆ, ಕಾಲದ ಹೊಡೆತ ಮತ್ತು ನಿರ್ಲಕ್ಷ್ಯದಿಂದ ಮೆಟ್ಟಿಲುಗಳು ಸಂಪೂರ್ಣ ಶಿಥಿಲಗೊಂಡಿವೆ. ಶತಮಾನಗಳ ಇತಿಹಾಸ ಹೊಂದಿರುವ ಕದಂಬೇಶ್ವರ ದೇವಾಲಯದ ಪಕ್ಕದಲ್ಲಿರುವ ಕಲ್ಲಿನ ಮೆಟ್ಟಿಲುಗಳು ಕುಸಿದು ಬೀಳುತ್ತಿದ್ದು, ಈ ಪ್ರದೇಶದ ಪರಂಪರೆ ಮತ್ತು ಹೆಮ್ಮೆ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ಒಂದು ಕಾಲದಲ್ಲಿ ಜನಜೀವನದ ಕೇಂದ್ರಬಿಂದು

ಬೆಳಗ್ಗೆಯಿಂದ ಸಂಜೆವರೆಗೆ ನೂರಾರು ಜನರು ಇದೇ ಮೆಟ್ಟಿಲುಗಳ ಮೂಲಕ ನದಿಗೆ ಇಳಿಯುತ್ತಿದ್ದರು. ನಾಗರ ಪಂಚಮಿ ದಿನ, ಹೊಳೆ ಪೂಜೆ, ಗಣೇಶ ಚತುರ್ಥಿಯ ಮೂರ್ತಿ ವಿಸರ್ಜನೆ, ಧಾರ್ಮಿಕ ಆಚರಣೆಗಳು ಈ ನದಿದಂಡೆಯ ಸುತ್ತಲೇ ನಡೆಯುತ್ತಿತ್ತು. ಕುಮದ್ವತಿ ನದಿ ಕೇವಲ ನೀರಿನ ಹರಿವಾಗಿರಲಿಲ್ಲ; ಅದು ರಟ್ಟಿಹಳ್ಳಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಜೀವನಾಡಿಯಾಗಿತ್ತು.

Kumudvathi

ಇಂದು ಅಪಾಯದ ಅಂಚಿನಲ್ಲಿ ಐತಿಹಾಸಿಕ ತಾಣ

ನಿರ್ವಹಣೆಯ ಕೊರತೆ, ಕಾಲದ ಹೊಡೆತ ಮತ್ತು ನಿರ್ಲಕ್ಷ್ಯದಿಂದ ಮೆಟ್ಟಿಲುಗಳು ಸಂಪೂರ್ಣ ಶಿಥಿಲಗೊಂಡಿವೆ. ಬೃಹತ್ ಕಲ್ಲುಗಳು ಕುಸಿದು ಬಿದ್ದಿದ್ದು, ನದಿಯತ್ತ ಇಳಿಯುವುದು ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಮತ್ತಷ್ಟು ಕುಸಿತ ಸಂಭವಿಸುವ ಭೀತಿ ಎದುರಾಗಿದೆ. ಇಂತಹ ಅಮೂಲ್ಯ ಪರಂಪರೆ ಕಣ್ಣೆದುರೇ ಹಾಳಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳ ಮೌನ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರಿಯಾದ ಯೋಜನೆ, ಅಭಿವೃದ್ಧಿ ಮತ್ತು ಸಂರಕ್ಷಣೆ ಇದ್ದಿದ್ದರೆ, ಕದಂಬೇಶ್ವರ ದೇವಾಲಯ ಮತ್ತು ಕುಮದ್ವತಿ ನದಿದಂಡೆ ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿ ಬೆಳೆಯಬಹುದಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಅವಕಾಶವೂ ಕೈತಪ್ಪುತ್ತಿರುವುದು ವಿಷಾದನೀಯ.

ಪಟ್ಟಣ ಪಂಚಾಯಿತಿ, ಜಿಲ್ಲಾ ಆಡಳಿತ, ಪುರಾತತ್ವ ಇಲಾಖೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ. ಕುಸಿದ ಮೆಟ್ಟಿಲುಗಳ ಪುನರ್‌ನಿರ್ಮಾಣ, ನದಿದಂಡೆಯ ಸಮಗ್ರ ಅಭಿವೃದ್ಧಿ, ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳು, ಪ್ರವಾಸೋದ್ಯಮಕ್ಕೆ ಪೂರಕ ಮೂಲಸೌಕರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.‌

image

ಒಂದು ಕಾಲದಲ್ಲಿ ಇದು ನಮ್ಮ ಊರಿನ ಹೆಮ್ಮೆ. ಇಂದು ಅದರ ದುಸ್ಥಿತಿ ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಸೂಕ್ತ ನಿರ್ವಹಣೆ ಇದ್ದಿದ್ದರೆ ಇದು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಬಹುದಿತ್ತು.

-ಅಂಬುಜಿ ರಾವ್ ಸುಬಾಸಪ್ಪ ಕಡೂರ್, ರಟ್ಟಿಹಳ್ಳಿ ನಿವಾಸಿ.