ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೈಲಾದ ಪ್ರಕಾರವೇ ವಚನಾನಂದ ಶ್ರೀ ಉಚ್ಚಾಟನೆ: ಹರಿಹರ ಪಂಚಮಸಾಲಿ ಪೀಠದ ಟ್ರಸ್ಟ್‌ ಸ್ಪಷ್ಟನೆ

Vachanananda Swamiji: ವಚನಾನಂದ ಸ್ವಾಮೀಜಿ ಅವರನ್ನು ಹರಿಹರ ಪಂಚಮಸಾಲಿ ಗುರುಪೀಠದಿಂದ ಉಚ್ಚಾಟನೆ ಮಾಡಿರುವ ಘಟನೆ ಸದ್ಯ ಭಾರಿ ಸಂಚಲನ ಮೂಡಿಸಿದೆ. ಇದೀಗ ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಮಹೇಶ ಹಾವೇರಿ ಸ್ಪಷ್ಟನೆ ನೀಡಿ ಬೈಲಾ ಪ್ರಕಾರವೇ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹಾವೇರಿ ನಗರದಲ್ಲಿ ನಡೆದ ಸುದ್ದಿಗೋಷ್ಠಿ

ಹಾವೇರಿ, ಏ. 15: ''ಹರಿಹರ ಪಂಚಮಸಾಲಿ ಪೀಠಕ್ಕೆ ವಚನಾನಂದ ಸ್ವಾಮೀಜಿ (Vachanananda Swamiji) ಅವರನ್ನು ನಾವೇ ಕರೆದು ಪಟ್ಟಕ್ಕೆ ಏರಿಸಿ, ಈಗ ನಾವೇ ಉಚ್ಚಾಟನೆ ಮಾಡುವ ಪರಿಸ್ಥಿತಿ ಬಂದಿರುವುದು ಬೇಸರ ಮೂಡಿಸಿದೆ. ಪೀಠದ ಬೈಲಾದ ಪ್ರಕಾರವೇ ಅವರನ್ನು ಉಚ್ಚಾಟನೆ ಮಾಡಲಾಗಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುವುದು'' ಎಂದು ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಮಹೇಶ ಹಾವೇರಿ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ (ಏಪ್ರಿಲ್‌ 15) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ಸಮಾಜವನ್ನು ಸಂಘಟನೆ ಮಾಡದೇ ಪೀಠದಲ್ಲಿದ್ದುಕೊಂಡು ವೈಯಕ್ತಿಕ ಕೆಲಸಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಅತಿಯಾಗಿ ಫಾರಿನ್ ಟ್ರಿಪ್ ಮಾಡುವುದು, ಸಿನಿಮಾ ನಟ, ನಟಿಯರ ಜತೆಗೆ ಫೋಟೊ ತೆಗೆಸಿಕೊಂಡು ಪೀಠದಲ್ಲಿ ಹಾಕುವುದು, ರಾಣಿ ಚನ್ನಮ್ಮನ ಫೋಟೊ ಬಿಸಿಲಿನಲ್ಲಿ ಹಾಕುವುದು, ರಾಜಕಾರಣಿಗಳ ಜತೆಗೆ ಅತಿಯಾಗಿ ಒಡನಾಟ ಇಟ್ಟುಕೊಳ್ಳುವುದು ಸೇರಿದಂತೆ ಅನೇಕ ವಿಚಾರಗಳಿಂದ ಬೇಸತ್ತು ಎಲ್ಲ ಟ್ರಸ್ಟಿಗಳು ಅವರನ್ನು ಪೀಠದಿಂದ ಉಚ್ಚಾಟನೆಗೆ ನಿರ್ಧಾರ ಕೈಗೊಂಡಿದ್ದಾರೆʼʼ ಎಂದರು.

ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಸ್ಪಷ್ಟನೆ:



ʼʼಸಮಾಜದ ಅನೇಕ ಹಿರಿಯರು 2008ಲ್ಲಿ ಹರಿಹರ ಪಂಚಮಸಾಲಿ ಪೀಠ ಸ್ಥಾಪಿಸಿದರು. ಯಾವುದೋ ಕಾರಣದಿಂದ ಸಿದ್ದಲಿಂಗ ಸ್ವಾಮಿಗಳನ್ನು ಪೀಠದಿಂದ ವಿಮುಕ್ತಿಗೊಳಿಸಲಾಯಿತು. ಆಗ ಬಾಲೆಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಸಲಹೆ ಮೇರೆಗೆ ವಚನಾನಂದ ಸ್ವಾಮೀಜಿ ಅವರನ್ನು ನೇಮಿಸಲಾಯಿತು. ಒಂದು ವರ್ಷ ಗದ್ದುಗೆ ಪೂಜೆ, ಅನುಷ್ಠಾನ ಎಲ್ಲ ಕಲಿಸಿ, ನಂತರ ಪಟ್ಟಾಧಿಕಾರ ಮಾಡಿದೆವುʼʼ ಎಂದು ವಿವರಿಸಿದರು.

ಲೆಕ್ಕ ಕೊಡಿ ಎಂದು ಕೇಳಿದ್ದಕ್ಕೆ ಟಾರ್ಗೆಟ್ ಮಾಡಿದ್ದಾರೆ; ಉಚ್ಚಾಟನೆ ಬಗ್ಗೆ ವಚನಾನಂದ ಸ್ವಾಮೀಜಿ ಮೊದಲ ಪ್ರತಿಕ್ರಿಯೆ

ಸುಳ್ಳು ಆರೋಪ

ʼʼಲಿಂಗಾಯತರೆಲ್ಲರೂ ನಾವು ವಿರಕ್ತ ಮತ್ತು ಗುರು ಪರಂಪರೆ, ಬಸವಣ್ಣನವರ ತತ್ವಗಳನ್ನು ನಂಬಿದವರು. ಆದರೆ, ಸ್ವಾಮೀಜಿ ಅದನ್ನು ಬಿಟ್ಟು ಭಕ್ತರಿಗೆ ಆಶೀರ್ವಾದ ಮಾಡುವುದನ್ನು ಮರೆತು ಐಷಾರಾಮಿ ಜೀವನಕ್ಕೆ ಮೊರೆ ಹೋದರು. ವಿದೇಶಿಯರ ಕರೆದುಕೊಂಡು ಬಂದು ಹೋಳಿ ಆಡಿದರು. ಇದು ನಮ್ಮ ಸಂಸ್ಕೃತಿ ಅಲ್ಲ. ಆಚಾರ, ವಿಚಾರ ಮರೆತು ಸಿನಿಮಾ, ರಾಜಕಾರಣಿಗಳನ್ನು ಕರೆಸಿ ಹುಚ್ಚಾಟ ಆರಂಭಿಸಿದರು. ಅನೇಕ ಬಾರಿ ಎಚ್ಚರಿಸಿದರೂ ಯಾರ ಮಾತೂ ಕೇಳಲಿಲ್ಲ. ಅವರ ಸಮ್ಮುಖದಲ್ಲೇ ಎಲ್ಲ ವ್ಯವಹಾರ ನಡೆದರೂ, ಆಗ ಕೇಳದವರು, ಈಗ ಅವ್ಯವಹಾರದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈಗ ಮುಗ್ದ ಭಕ್ತರ ಕಟ್ಟಿಕೊಂಡು ಟ್ರಸ್ಟ್ ವಿರುದ್ಧ ಎತ್ತಿಕಟ್ಟಿದ್ದಾರೆ. ಇಂತಹ ಸ್ವಾಮೀಜಿ ಪೀಠಕ್ಕೆ ಕರೆತಂದಿದ್ದಕ್ಕೆ ಸಮಾಜದವರಲ್ಲಿ ಕ್ಷಮೆ ಕೋರುತ್ತೇವೆʼʼ ಎಂದು ಭಾವುಕರಾದರು.

ʼʼಈ ಘಟನೆ ಪೀಠದ ಭಕ್ತರಿಗೆ ನೋವು ಉಂಟು ಮಾಡಿದೆ. ಶ್ವಾಸ ಪೀಠ ಅಥವಾ ಪಂಚಮಸಾಲಿ ಪೀಠ ಎರಡರಲ್ಲಿ ಒಂದನ್ನು ಬಿಡಿ ಎಂದಾಗ ಲೆಕ್ಕ ಕೊಡಿ ಎಂದು ಗಲಾಟೆ ಎಬ್ಬಿಸಿದರು. ಪೀಠದ ನಿಯಮ ಮೀರಿದ್ದರಿಂದ ಉಚ್ಚಾಟನೆ ಮಾಡಲಾಗಿದೆ. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲಲ್ಲ. ಹೊಸ ಸ್ವಾಮೀಜಿ ನೇಮಕ ಮಾಡುವ ಕುರಿತು ಹಿರಿಯರೊಂದಿಗೆ ಚರ್ಚಿಸಲಾಗುವುದುʼʼ ಎಂದರು.

ಶೋಕಿ ಜೀವನ

ರಾಜಣ್ಣ ಪಾಟೀಲ ಮಾತನಾಡಿ, ʼʼರಾಜಕಾರಣಿಗಳಿಗೆ ಟಿಕೆಟ್ ಕೊಡಿಸಲು ಓಡಾಟ, ಶೋಕಿ ಜೀವನ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ, ಕುಲಪತಿಗಳ ನೇಮಕಾತಿಗೆ ಡೀಲ್ ಮಾಡಲು ಪೀಠ ದುರ್ಬಳಕೆ ಮಾಡಿಕೊಂಡಿದ್ದರುʼʼ ಎಂದು ಆರೋಪಿಸಿದರು.

ಬಹಿರಂಗವಾಗಿ ಲೆಕ್ಕ ಕೊಡಲು ಆಗದು

ಹರಿಹರ ಪಂಚಮಸಾಲಿ ಪೀಠದ ಹಿರಿಯ ಧರ್ಮದರ್ಶಿ ಪಿ.ಡಿ.ಶಿರೂರ ಮಾತನಾಡಿ, ʼʼಸರ್ಕಾರದಿಂದ 25 ಕೋಟಿ ರುಪಾಯಿ ಅನುದಾನ ಪೀಠಕ್ಕೆ ಬಂದಿದೆ. ಪೀಠದ ಭಕ್ತರು 10 ರುಪಾಯಿಂದ ಹಿಡಿದು 50 ಲಕ್ಷ ರುಪಾಯಿವರೆಗೆ ದೇಣಿಗೆ ಕೊಟ್ಟಿದ್ದಾರೆ. ಕೆಲವರು ಗುಪ್ತದಾನ ಕೊಟ್ಟಿದ್ದಾರೆ. ಎಲ್ಲದಕ್ಕೂ ಲೆಕ್ಕ ಇದೆ. ಬಹಿರಂಗವಾಗಿ ಎಲ್ಲವನ್ನೂ ಲೆಕ್ಕ ಕೊಡಲು ಆಗದು. ಪೀಠದ ಪರಿಮಿತಿಯಲ್ಲಿ ಬಂದು ಭಕ್ತರು ಕೇಳಿದರೆ ಎಲ್ಲ ಲೆಕ್ಕ ಕೊಡಲು ಈಗಲೂ ಸಿದ್ಧ ಎಂದು ಹೇಳಿದರು.

ಹಣಕಾಸು ಅವ್ಯವಹಾರ ಆರೋಪ; ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಮ್ಮ ಹುಲ್ಲತ್ತಿ, ರಾಜ್ಯ ಉಪಾಧ್ಯಕ್ಷ ಶಂಕರ ಬಿಸರಳ್ಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ಕಾನೂನು ಸಲಹೆಗಾರ ಸೋಮಶೇಖರ ಕೊತಂಬರಿ, ರಾಜಣ್ಣ ಪಾಟೀಲ, ನಿಜಲಿಂಗಪ್ಪ ಮುದಿಯಣ್ಣವರ, ಜಗದೀಶ ಕನವಳ್ಳಿ, ಸದಾನಂದ ಹಾದಿಮನಿ, ಬಸವರಾಜ ಹಾವಕ್ಕನವರ, ಜಗದೀಶ ಕನವಳ್ಳಿ, ಬಸವರಾಜ ಪಾಟೀಲ್, ಶಿವಪ್ಪ ಗುರಿಕಾರ, ಹೊಳೆಯಪ್ಪ ಸುರದ ಉಪಸ್ಥಿತರಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author