ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ (JDS Party) 25ನೇ ವರ್ಷದ ಸಂಭ್ರಮ ಸಮಾರಂಭ ನಡೆಯುತ್ತಿದ್ದು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ (HD Devegowda), ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಪುನರ್ ಆಯ್ಕೆ ಆಗಿದ್ದಾರೆ. ನಿನ್ನೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಇಬ್ಬರನ್ನೂ ಒಮ್ಮತದಿಂದ ಆಯ್ಕೆ ಮಾಡಲಾಗಿದೆ.
ಜೆಡಿಎಸ್ ಪಕ್ಷ ಸ್ಥಾಪನೆ ಆಗಿ 25 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ರಜತ ಮಹೋತ್ಸವವನ್ನು ಜೆಡಿಎಸ್ ಆಚರಿಸಿಕೊಳ್ಳುತ್ತಿದೆ. ಬೃಹತ್ ಸಮಾವೇಶ ಜೆಪಿ ಭವನದಲ್ಲಿ ನಡೆಯುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸೇರಿ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ. 2 ದಿನಗಳ ರಜತಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರುವ ಸಾಧ್ಯತೆ ಇದೆ.
ನಿನ್ನೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇವೇಗೌಡರ ಜೀವನ, ರಾಜಕೀಯ ಹಾದಿ, ಸಾಧನೆ, ಜೆಡಿಎಸ್ ಪಕ್ಷ ನಡೆದು ಬಂದ ಹಾದಿ, ಕುಮಾರಸ್ವಾಮಿ ಅವರ ಸಾಧನೆ, ಕೊಡುಗೆ ಬಗ್ಗೆ ಎಕ್ಸಿಬಿಷನ್ ಆಯೋಜನೆ ಮಾಡಲಾಗಿತ್ತು. ಇದಕ್ಕೆ ದೇವೇಗೌಡರು, ಕುಮಾರಸ್ವಾಮಿ ಚಾಲನೆ ನೀಡಿದರು. ಬಳಿಕ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದು ರೈತರ ಪರ ಹೋರಾಟ ಮಾಡುವುದು ಮತ್ತು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಸಂಘಟನೆ ಮಾಡುವ ನಿರ್ಣಯವನ್ನು ಕಾರ್ಯಕಾರಿಣಿ ತೆಗೆದುಕೊಂಡಿದೆ.
ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ದೇವೇಗೌಡರು, 1999 ರಲ್ಲಿ ಜನತಾದಳ ಒಡೆದು ಹೋದಾಗ ಯಾರೂ ಅಧ್ಯಕ್ಷರಾಗೋಕೆ ಮುಂದೆ ಬರಲಿಲ್ಲ. ಕೊನೆಗೆ ನನಗೆ ಜವಾಬ್ದಾರಿ ಕೊಟ್ಟರು ಎಂದು ಇತಿಹಾಸ ನೆನಪು ಮಾಡಿಕೊಂಡರು. 2023 ರಲ್ಲಿ ಕುಮಾರಸ್ವಾಮಿ ಚುನಾವಣೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದರು. ಆದರೆ ಕೊನೆಗೆ ಗ್ಯಾರಂಟಿ ಯೋಜನೆ ಅಂತ ತಂದು ನಮಗೆ ಹಿನ್ನಡೆ ಆಯ್ತು ಅಂತ 2023ರ ಚುನಾವಣೆ ಬಗ್ಗೆ ನೆನಪು ಮಾಡಿಕೊಂಡರು.
ಇಂದು ಸಿಎಂ ಆಗಿರುವವರೇ ಅಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಳಗಿಳಿಸಿದ್ದು ಎಂದು ವಾಗ್ದಾಳಿ ನಡೆಸಿದ ದೇವೇಗೌಡರು, ತಮ್ಮ ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೂ ಉತ್ತರ ಕೊಟ್ಟರು. ಕುಮಾರಸ್ವಾಮಿ ನೇತೃತ್ವದಲ್ಲಿ ಮತ್ತೆ ಪಕ್ಷ ರಾಜ್ಯ ಮತ್ತು ದೇಶದಲ್ಲಿ ತಲೆ ಎತ್ತಿ ನಿಲ್ಲಬೇಕು ಎಂದು ಕರೆ ಕೊಟ್ಟರು.
ಕೇಂದ್ರ ಸಚಿವ ಕುಮಾರಸ್ವಾಮಿ ಮಾತಾಡಿ, 2028ಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಹಾರಕ್ಕಿಂತ ದೊಡ್ಡ ಜಯ ರಾಜ್ಯದಲ್ಲಿ ಸಿಗಲಿದೆ. ಅಂತ ವಿಶ್ವಾಸ ವ್ಯಕ್ತಪಡಿಸಿದರು. ನಿಖಿಲ್ ಕುಮಾರಸ್ವಾಮಿ ಮಾತಾಡಿ, ರಾಜ್ಯದ ಜನ 2028ಕ್ಕೆ ಜೆಡಿಎಸ್ ಕೈ ಹಿಡಿಯುತ್ತಾರೆ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ ಅಂತ ತಿಳಿಸಿದರು.