ನವ ದೆಹಲಿ: ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷಕ್ಕೆ ಡ್ಯಾಮೇಜ್ ಆಗುವಂತೆ ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕದ ಐವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ನೋಟಿಸ್ ಜಾರಿ ಮಾಡಿದೆ. ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು, ರಾಜ್ಯದ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ. ಹರೀಶ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದೆ.
ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ಅಂತರಿಕ ವಿಚಾರಗಳನ್ನು ಬಹಿರಂಗವಾಗಿ ಮತ್ತು ಅನಗತ್ಯವಾಗಿ ಹೇಳಿಕೆ ನೀಡಿದ್ದೀರಿ. ಈ ನಿಟ್ಟಿನಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು ಎಂದು ವಿವರಣೆ ನೀಡುವಂತೆ 72 ಗಂಟೆಗಳ ಕಾಲಾವಕಾಶ ನೀಡಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಈಗಾಗಲೇ ಸೋಮಶೇಖರ್ ಅವರು ಬಹಿರಂಗವಾಗಿಯೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು, ಸರ್ಕಾರದ ಯೋಜನೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಗೊತ್ತೇ ಇದೆ. ಅತ್ತ ಶಿವರಾಮ್ ಹೆಬ್ಬಾರ್ ಅವರ ಸಹ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಇಬ್ಬರ ನಾಯಕರ ನಡೆ ಬಗ್ಗೆ, ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯು ಈಗಾಗಲೇ ಕ್ರಮವಾಗಲಿದೆ ಎಂದಿತ್ತು. ಇದೀಗ ಇವರು ಸೇರಿ ಐವರಿಗೆ ನೋಟಿಸ್ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ | BJP Karnataka: ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ: ಬಿ.ವೈ.ವಿಜಯೇಂದ್ರ
ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಸರ್ವಾನುಮತದಿಂದ ಆಯ್ಕೆ

ನವದೆಹಲಿ: ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ, ಖ್ಯಾತ ಉದ್ಯಮಿ ರಾಜೀವ್ ಚಂದ್ರಶೇಖರ್ (Rajeev Chandrashekhar) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಕೇರಳ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಘೋಷಿಸಿದರು. ಈ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೇರಳ ಬಿಜೆಪಿ ಹೊಸ ಎತ್ತರಕ್ಕೆ ಬೆಳೆಯಲಿದೆ. ಕೇರಳದಲ್ಲಿ ಬಿಜೆಪಿಗೆ ಶೇ.19 ರಷ್ಟು ಮತ ಹಂಚಿಕೆಯಾಗಿದ್ದು, ಭವಿಷ್ಯದಲ್ಲಿ ರಾಜೀವ್ ಅವರ ನಾಯಕತ್ವದಲ್ಲಿ ಬಿಜೆಪಿ ಇಲ್ಲಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದೊಂದಿಗೆ ಕೇರಳದ ಅಭಿವೃದ್ಧಿಗೂ ನೂತನ ಅಧ್ಯಕ್ಷರು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ಸ್ಪಷ್ಟ ನಿಲುವು ಮತ್ತು ಹೊಸ ಹೊಸ ಯೋಜನೆ, ಯೋಚನೆಗಳನ್ನು ಹೊಂದಿದವರಾಗಿದ್ದಾರೆ. ರಾಜೀವ್ ಅವರು ಒಬ್ಬ ಉದ್ಯಮಿ ಆಗಿದ್ದರೂ ವಿಶೇಷವಾಗಿ ದೂರಸಂಪರ್ಕ ವಲಯದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಚಂದ್ರಶೇಖರ್ ಅವರ ಉದ್ಯಮಶೀಲತೆಯನ್ನು ಮೆಚ್ಚಿ ಸಚಿವರನ್ನಾಗಿ ಮಾಡಿದ್ದರು. ಈಗ ಕೇರಳದಲ್ಲಿ ಮತ್ತೊಂದು ಹೊಸ ಜವಾಬ್ದಾರಿ ನೀಡಿದ್ದಾರೆ. ಒಬ್ಬ ಒಳ್ಳೇ ಹೋರಾಟಗಾರ ಮತ್ತು ಸಂಘಟಕರಾಗಿ ಪಕ್ಷವನ್ನು ಬಲಪಡಿಸುತ್ತಾರೆ ಎಂದು ಜೋಶಿ ಹೇಳಿದರು.
ರಾಜೀವ್ ಚಂದ್ರಶೇಖರ್ ಅವರನ್ನು 25 ವರ್ಷಗಳಿಂದ ಬಲ್ಲೆ. ಅವರೊಬ್ಬ ಬಲಿಷ್ಠ ಕೇರಳಿಗ ಆಗಿದ್ದರೂ ಬೆಂಗಳೂರಿನಲ್ಲಿ ಉತ್ತಮ ಮೂಲಸೌಕರ್ಯಕ್ಕಾಗಿ ವೇದಿಕೆ ರಚಿಸಿ ಕೆಲಸ ಮಾಡಿದರು. ಕೇರಳಕ್ಕೆ ಸದ್ಯ ಇಂಥವರ ಅಗತ್ಯವಿತ್ತು ಎಂದು ಅವರು ಅಭಿಪ್ರಾಯಪಟ್ಟರು.