ಬೆಂಗಳೂರು: ಡೀಸೆಲ್ ದರ ಹಾಗೂ ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ರಾಜ್ಯಾದ್ಯಂತ ಇಂದು ಮಧ್ಯರಾತ್ರಿ (ಏ.14) ಅನಿರ್ದಿಷ್ಟಾವಧಿ ಮುಷ್ಕರ (Lorry owners Strike) ನಡೆಸಲು ರಾಜ್ಯ ಲಾರಿ ಮಾಲೀಕರ ಸಂಘ ನಿರ್ಧರಿಸಿದೆ. ಈ ಬಗ್ಗೆ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಮಾತನಾಡಿ, ಇಂದು ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಈಗಾಗಲೇ ಕರೆ ನೀಡಲಾಗಿದೆ. ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿ ರಾಜ್ಯವ್ಯಾಪಿ ಲಾರಿ ಮಾಲೀಕರು ಬೆಂಬಲಿಸಿದ್ದಾರೆ. ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಕೆಲ ಬಣದ ನಾಯಕರು ಸರ್ಕಾರದೊಟ್ಟಿಗೆ ಕೈಜೋಡಿಸಿದ್ದು, ಮುಷ್ಕರಕ್ಕೆ ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಹಲವು ಪೆಟ್ರೋಲ್ ಬಂಕ್ ಮಾಲೀಕರು, ಸಂಘಟನೆಗಳು ಸೇರಿದಂತೆ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಹಾಗಾಗಿ ಮುಷ್ಕರ ನಡೆಸುವುದು ನಿಶ್ಚಿತ ಎಂದು ಹೇಳಿದ್ದಾರೆ.
ಅಲ್ಲದೇ ಮುಷ್ಕರ ಸಮಯದಲ್ಲಿ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸಂಚಾರವನ್ನು ಸ್ಥಗಿತಗೊಳಿಸಲಿವೆ. ಹೊರರಾಜ್ಯಗಳಿಂದಲೂ ಲಾರಿಗಳು ಬರಲು ಬಿಡುವುದಿಲ್ಲ. ಅಂದು ವಾಣಿಜ್ಯ ಸೇರಿ ಎಲ್ಲ ಮಾದರಿಯ ಸರಕು ಸೇವೆಗಳು ಸ್ತಬ್ಧಗೊಳ್ಳಲಿದೆ ಎಂದು ಹೇಳಿದ್ದಾರೆ.
ಮತ್ತೊಂದು ಬಣದಿಂದ ವಿರೋಧ
ಈ ಲಾರಿ ಮುಷ್ಕರಕ್ಕೆ ಮತ್ತೊಂದು ಬಣವಾದ ಫೆಡರೇಶನ್ ಆಫ್ ಲಾರಿ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಇದರ ಗೌರವ ಅಧ್ಯಕ್ಷ ಚನ್ನಾರೆಡ್ಡಿ ಇತ್ತೀಚೆಗೆ ಮಾತನಾಡಿ, ಈ ಮುಷ್ಕರಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದ್ದರು. ಎಂದಿನಂತೆ ಲಾರಿಗಳು ಸಂಚರಿಸಲಿವೆ, ಮುಷ್ಕರದ ಭಯ ಸಾರ್ವಜನಿಕರಿಗೆ ಬೇಡ. ಲಾರಿಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ. ಪುದುಚೇರಿಯನ್ನು ಹೊರತು ಪಡಿಸಿದರೆ, ಟ್ಯಾಕ್ಸ್ ಕರ್ನಾಟಕದಲ್ಲೇ ಕಮ್ಮಿ ಎಂದು ಹೇಳಿದ್ದರು.
ಈಗಾಗಲೇ ದರ ಕಮ್ಮಿಯಿದೆ, ಮತ್ತೆ ಮುಷ್ಕರ ಹೂಡಿ ಸರ್ಕಾರದ ಜತೆಗೆ ಘರ್ಷಣೆಗೆ ಇಳಿಯಲು ಸಾಧ್ಯವಿಲ್ಲ. ಎರಡು ರೂಪಾಯಿ ಟ್ಯಾಕ್ಸ್ ಜಾಸ್ತಿ ಮಾಡಿದ ದಿನ ಎಲ್ಲವನ್ನೂ ಲೆಕ್ಕ ಹಾಕಿದ್ದೇನೆ. ಸರ್ಕಾರದ ಮೇಲೆ ಒತ್ತಡ ತರಲು ಕಷ್ಟವಾಗುತ್ತದೆ. ಹಾಗಾಗಿ, ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಚನ್ನಾರೆಡ್ಡಿ ಹೇಳಿದ್ದರು.
ಸರ್ಕಾರ ಡೀಸೆಲ್ ಬೆಲೆ ಜಾಸ್ತಿ ಮಾಡಿದಾಗ, ಕಮ್ಮಿ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ ಮುಷ್ಕರ ನಡೆಸುವ ಸಂದರ್ಭ ಎದುರಾಗಿಲ್ಲ. ಎರಡು ದಿನ ಮುಷ್ಕರ ಆದ ಮೇಲೆಯೇ ಮಾತುಕತೆಗೆ ಕರೆಯುವುದು ಸರ್ಕಾರಗಳ ಹವ್ಯಾಸ ಎಂದು ಚನ್ನಾರೆಡ್ಡಿ ತಿಳಿಸಿದ್ದರು.