ಬೆಂಗಳೂರು, ಡಿ.05: ನಾಲ್ಕನೇ ದಿನವೂ ಇಂಡಿಗೋ ವಿಮಾನ ರದ್ದತಿಯ ಸಮಸ್ಯೆ ಮುಂದುವರಿದ್ದು, ವಿವಿಧ ವಿಮಾನ ನಿಲ್ದಾಣಗಳಲ್ಲಿ 550ಕ್ಕೂ ಹೆಚ್ಚು ವಿಮಾನಗಳ ಹಾರಾಟ (IndiGo Flights Cancellations) ರದ್ದುಗೊಳಿಸಲಾಗಿದೆ. ಇಂದು ದಿಲ್ಲಿ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಿಂದ ಹೊರಡುವ ಎಲ್ಲ ಇಂಡಿಗೋ ವಿಮಾನಗಳನ್ನು ರದ್ದುಪಡಿಸಲಾಗಿದೆ. ಬೆಂಗಳೂರು (Bengaluru airport) ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಫ್ಲೈಟ್ ಸಿಗದೆ ಒದ್ದಾಡುತ್ತಿದ್ದಾರೆ.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಕೆಲವು ಸೇವೆಗಳು ವ್ಯತ್ಯಯಗೊಂಡಿವೆ. ದೆಹಲಿ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಂದು 200 ಕ್ಕೂ ಹೆಚ್ಚು ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಗೊಂದಲ ಮುಂದುವರಿದಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದ ಜನರು ಏರ್ಪೋರ್ಟ್ನಲ್ಲೇ ಭಜನೆ ಮಾಡಿದ್ದಾರೆ. ಹರೇ ಕೃಷ್ಣ, ಹರೇ ರಾಮ ಅಂತ ಹಾಡಿ ಕುಣಿದಿದ್ದಾರೆ. 10 ಗಂಟೆ ವಿಮಾನ ವಿಳಂಬದ ಹಿನ್ನಲೆ ಪ್ರಯಾಣಿಕರು ಅಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ:-
ಪ್ರವಾಸ ,ಬ್ಯುಸಿನೆಸ್, ಸೇರಿದಂತೆ ಹಲವು ಕೆಲಸದ ನಿಮಿತ್ತ ತೆರಳಿದ್ದ ಕನ್ನಡಿಗರು ವಾಪಸ್ ಬರಲಾಗದೆ ಪರದಾಡುತ್ತಿದ್ದಾರೆ. ನಾಲ್ಕು ದಿನದ ಅಂತರದಲ್ಲಿ 550ಕ್ಕೂ ಅಧಿಕ ವಿಮಾನಗಳು ರದ್ದಾಗಿದೆ ಎಂದು ತಿಳಿದು ಬಂದಿದೆ. ಏರ್ಪೋರ್ಟ್ಗಳಲ್ಲಿ ಇಂಡಿಗೋ ಪ್ರಯಾಣಿಕರ ಪರದಾಟ ಮುಂದುವರೆದಿದ್ದು, ಟಿಕೆಟ್ ಬುಕ್ ಮಾಡಿದವರು ಫ್ಲೈಟ್ ಸಿಗದೆ ಒದ್ದಾಡಿದ್ದಾರೆ. ಇಂಡಿಗೋ ಕೌಂಟರ್ ಗಳ ಮುಂದೆ ಟಿಕೆಟ್ ಕ್ಯಾನ್ಸಲ್‌ಗೆ ಉದ್ದದ್ದ ಕ್ಯೂ ಇದೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಸಮರ್ಪಕ ಮಾಹಿತಿ ಕೊಡುತ್ತಿಲ್ಲ ಎಂದು ಜನ ಆಕ್ರೋಶ ತೋರಿಸಿದ್ದಾರೆ.
200 ಇಂಡಿಗೋ ವಿಮಾನ ಹಾರಾಟ ರದ್ದು, ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಕರ ಪರದಾಟ
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳಬೇಕಿದ್ದ 22 ಜನ ಪ್ರಯಾಣಿಕರು ಇದ್ದಕ್ಕಿದ್ದಂತೆ ಬೆಳಗ್ಗೆ ಪ್ಲೈಟ್ ಕ್ಯಾನ್ಸಲ್ ಮಾಡಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಚಳಿ ಗಾಳಿಯ ನಡುವೆ ಕಾಯುತ್ತಿದ್ದರೂ ಏರ್ ಲೈನ್ಸ್ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಚಂಢಿಗಢದ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ವಿಮಾನಗಳು ಇಲ್ಲದೆ 20 ಜನ ಕನ್ನಡಿಗರು ಪರದಾಡಿದ್ದಾರೆ.