Karnataka Budget 2025: ಬಜೆಟ್‌ನಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ; ಲಕ್ಷಾಂತರ ಉದ್ಯೋಗ ಸೃಷ್ಟಿ ನಿರೀಕ್ಷೆ
Karnataka Budget 2025: ನಾನು ಮಂಡಿಸಿರುವ ಈ ಬಜೆಟ್ ಮುಂದಿನ ಒಂದು ವರ್ಷ ಕಾಲ ಕರ್ನಾಟಕವನ್ನು ಸಶಕ್ತಿ, ಸಮೃದ್ಧಿ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ ಎನ್ನುವ ಪೂರ್ಣ ವಿಶ್ವಾಸ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.


ಬೆಂಗಳೂರು: 2025-26ನೇ ಸಾಲಿನ ಬಜೆಟ್‌ನಲ್ಲಿ ಕೈಗಾರಿಕಾ ವಲಯಕ್ಕೆ ಘೋಷಣೆ ಪ್ರಮುಖ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟದೊಂದಿಗೆ ಸಿದ್ಧಪಡಿಸಿರುವ ನಮ್ಮ ಈ ಬಜೆಟ್ ಅನ್ನು ಸಮಸ್ತ ಕನ್ನಡಿಗರಿಗೆ ಅರ್ಪಿಸುತ್ತಿದ್ದೇನೆ. ನಾನು ಮಂಡಿಸಿರುವ ಈ ಬಜೆಟ್ ಮುಂದಿನ ಒಂದು ವರ್ಷ ಕಾಲ ಕರ್ನಾಟಕವನ್ನು ಸಶಕ್ತಿ, ಸಮೃದ್ಧಿ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ ಎನ್ನುವ ಪೂರ್ಣ ವಿಶ್ವಾಸ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
- ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಬಂಡವಾಳವನ್ನು ರಾಜ್ಯಕ್ಕೆ ಆಕರ್ಷಿಸುವ ಸಂಬಂಧ ಏರ್ಪಡಿಸಿದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka-2025) ವಿವಿಧ ಕಂಪನಿಗಳೊಂದಿಗೆ 10.27 ಲಕ್ಷ ಕೋಟಿ ರೂ. ಹೂಡಿಕೆಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ 6 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗವಕಾಶ ನಿರೀಕ್ಷಿಸಲಾಗಿದೆ.
- ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಘೋಷಿಸಲಾದ ಹೊಸ ಕೈಗಾರಿಕಾ ನೀತಿ 2025-30 ರಿಂದ 7.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 20 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಹೊಂದಿದೆ.
- ರಾಜ್ಯ ಸರ್ಕಾರವು Karnataka Clean Mobility Policy 2025-30 ಅನ್ನು ಘೋಷಿಸಿದ್ದು, ಇದರಿಂದ ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ 50,000 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುವ ಹಾಗೂ ಸರಿಸುಮಾರು ಒಂದು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.
- E.V. ವಾಹನಗಳ ತಯಾರಿಕೆ ಹಾಗೂ ಬಳಕೆಗೆ ಉತ್ತೇಜನ ನೀಡಲು ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ E.V ಕ್ಲಸ್ಟರ್‌ನ್ನು ನಿರ್ಮಿಸಲಾಗುವುದು. ಈ ಉದ್ದೇಶಕ್ಕಾಗಿ 25 ಕೋಟಿ ರೂ. ಅನುದಾನವನ್ನು ಒದಗಿಸಿದೆ.
- ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ Foxconn ಸಂಸ್ಥೆಯಿಂದ ಮೊಬೈಲ್ ಫೋನ್ ಗಳ ಉತ್ಪಾದನಾ ಫಟಕವು 21,911 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಪ್ರಾರಂಭಗೊಂಡಿದೆ. ಇದರಿಂದ 50,000 ಉದ್ಯೋಗ ಸೃಜನೆಯನ್ನು ನಿರೀಕ್ಷಿಸಲಾಗಿದೆ. ಈ ಕಂಪನಿಗೆ ಇ.ಎಸ್.ಡಿ.ಎಂನ ನೀತಿಯಡಿ 6,970 ಕೋಟಿ ರೂ.ಗಳ ಪ್ರೋತ್ಸಾಹಕಗಳನ್ನು ನೀಡಲಾಗುವುದು.
- ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಹಾಗೂ ಉತ್ತಮ ವಾತಾವರಣವನ್ನು ಕಲ್ಪಿಸಲು ಕೋಲಾರ ಜಿಲ್ಲೆಯ ನರಸಾಪುರದಲ್ಲಿ 173 ಕೋಟಿ ರೂ. ವೆಚ್ಚದಲ್ಲಿ 6,000 ಸಾಮರ್ಥ್ಯದ ಮಹಿಳಾ ವಸತಿ ನಿಲಯ ಹಾಗೂ ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು.
- ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸಲು ವಿಜಯಪುರದ ತಿಡಗುಂಡಿಯಲ್ಲಿ Plug & Play ಸೌಲಭ್ಯವಿರುವ Flat Factory ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
- ಮಾಲಿನ್ಯವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ Multi Sector Net Zero Sustainability Industrial Park ಅನ್ನು PPP ಮಾದರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
- ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ತುಮಕೂರು ಕೈಗಾರಿಕಾ ನೋಡ್‌ನಲ್ಲಿ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲಾಗುವುದು.
- MSME ವಲಯಕ್ಕೆ ಪ್ರೋತ್ಸಾಹ ನೀಡಲು MSE ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದುವರೆಗೂ 16 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿದ್ದು ಸುಮಾರು 1,379 MSME ಘಟಕಗಳು ಈ ಸಾಮಾನ್ಯ ಸೌಲಭ್ಯ ಕೇಂದ್ರಗಳ ಸೇವೆ ಬಳಸಿಕೊಳ್ಳುತ್ತಿವೆ. 26,750 ಉದ್ಯೋಗಗಳನ್ನು ಸೃಜಿಸಲಾಗಿದೆ. ಈ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರದ ವಂತಿಗೆ 22 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ.
- ನಮ್ಮ ಸರ್ಕಾರವು ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿ ಜೀವನ ಮಟ್ಟವನ್ನು ಸುಧಾರಿಸಲು ಬದ್ಧವಾಗಿದೆ. ಬಿದರಿ ಕಲಾಕೃತಿಗಳ ಹಾಗೂ ಶ್ರೀಗಂಧ ಕಲಾಕೃತಿಗಳ ಕಚ್ಚಾ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲು ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು.
- ಕೈಗಾರಿಕಾ ನೀತಿ 2020-25 ರ ಅಡಿಯಲ್ಲಿ ಅಂದಾಜು 3,758 MSME ಘಟಕಗಳಿಗೆ ನೆರವು ನೀಡಲು 2025-26 ನೇ ಸಾಲಿನಲ್ಲಿ 185 ಕೋಟಿ ರೂ. ಒದಗಿಸಿದೆ.
- ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು, MSME ಗಳ ಪ್ರಾಮುಖ್ಯತೆಯನ್ನು ಗುರುತಿಸಿ, ಆರ್ಥಿಕತೆಗೆ ವೇಗ ನೀಡಲು ಮತ್ತು ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಿ MSME ವಲಯಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಪ್ರತ್ಯೇಕ MSME ನೀತಿಯನ್ನು ರೂಪಿಸಲಾಗುವುದು.
- 2024-25ನೇ ಸಾಲಿನಲ್ಲಿ ಹೊಸ ಮರಳು ಗಣಿಗಾರಿಕೆ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಿಯಮಗಳಡಿ reverse auction ಮೂಲಕ ಪಾರದರ್ಶಕವಾಗಿ ಮರಳು ಬ್ಲಾಕ್ ಗಳನ್ನು ಮಂಜೂರು ಮಾಡಲಾಗುತ್ತಿದೆ. ಇದರಿಂದ, ರಾಜ್ಯಾದ್ಯಂತ ಏಕರೂಪ ದರದಲ್ಲಿ ಮರಳನ್ನು ಒದಗಿಸಲು ಸಹಕಾರಿಯಾಗಲಿದೆ.
- ಖನಿಜಗಳ ಸಾಗಾಣಿಕೆಗೆ ಪರವಾನಗಿ ನೀಡಲು ಹಾಗೂ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು Integrated Lease Management System (ILMS) 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
- 2024-25ನೇ ಸಾಲಿನಲ್ಲಿ 10 ಕಬ್ಬಿಣದ ಅದಿರಿನ ಖನಿಜ ಬ್ಲಾಕ್‌ಗಳನ್ನು ಹರಾಜು ಪ್ರಕ್ರಿಯೆಗೊಳಪಡಿಸಿ, ಹೆಚ್ಚಿನ ರಾಜಸ್ವ ಸಂಗ್ರಹಣೆಗೆ ಕ್ರಮವಹಿಸಲಾಗಿರುತ್ತದೆ. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಒಟ್ಟಾರೆ 5,847 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗುವುದು.
- ರಾಜ್ಯದ ಸಕ್ಕರೆ ಕಾರ್ಖಾನೆಗಳು 2023-24ನೇ ಸಾಲಿನಲ್ಲಿ 585 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 5೩ ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿವೆ. ಈ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿ ಮಾಡಬೇಕಾದ ಸಂಪೂರ್ಣ ಬಿಲ್ಲುಗಳನ್ನು ಪಾವತಿಸಿವೆ.
- ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ 2025-26ನೇ ಸಾಲಿಗೆ 20 ಕೋಟಿ ರೂ. ಒದಗಿಸಲಾಗಿದೆ.
- ಕಾರ್ಮಿಕರ ಕೊರತೆಯಿಂದಾಗುವ ಕಬ್ಬು ಕಟಾವಿನ ಸಮಸ್ಯೆಯನ್ನು ನಿವಾರಿಸಲು ಹೈಟೆಕ್ ಹಾರ್ವೆಸ್ಟರ್ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ಒದಗಿಸಲು 140 ಕ್ಕಿಂತ ಹೆಚ್ಚು ಶುಗರ್ ಕೇನ್ ಹಾರ್ವೆಸ್ಟರ್ ಹಬ್‌ಗಳನ್ನು (ಕಬ್ಬು ಕಟಾವು ಯಂತ್ರ) ಸ್ಥಾಪಿಸಲು 70 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ.
- ನೇಕಾರರಿಗೆ ಆರ್ಥಿಕ ಸ್ವಾವಲಂಬನೆಯನ್ನು ಕಲ್ಪಿಸಿ, ಅವರ ಜೀವನ ಮಟ್ಟವನ್ನು ಉನ್ನತೀಕರಿಸಲು ಮತ್ತು ನೇಕಾರಿಕೆ ಉದ್ದಿಮೆಯನ್ನು ಉತ್ತೇಜಿಸಲು, ಈಗ ಚಾಲ್ತಿಯಲ್ಲಿರುವ ಅನೇಕ ಉಪಯೋಜನೆಗಳನ್ನು ಒಗ್ಗೂಡಿಸಿ ʻನೇಕಾರರ ಪ್ಯಾಕೇಜ್-2.0ʼ ಜಾರಿಗೊಳಿಸಲಾಗುವುದು.
- ನೇಕಾರರಿಗೆ ಒಂದರಿಂದ 10 HP ವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 10 HP ಯಿಂದ 20 HP ವರೆಗಿನ ಮಗ್ಗಗಳಿಗೆ ವಿಧಿಸಲಾಗಿದ್ದ ವಿದ್ಯುತ್ ಮಿತಿಯನ್ನು ಸಡಿಲಿಸಿದೆ. ಒಟ್ಟಾರೆ 90,645 ನೇಕಾರರಿಗೆ ಉಚಿತ ವಿದ್ಯುತ್ ಹಾಗೂ ರಿಯಾಯಿತಿ ವಿದ್ಯುತ್ ಸವಲತ್ತನ್ನು ಒದಗಿಸಲು 100 ಕೋಟಿ ರೂ. ಅನುದಾನ ಒದಗಿಸಲಾಗಿದೆ.
- ರಾಜ್ಯದಲ್ಲಿ ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಿ ಸುಮಾರು ಎರಡು ಲಕ್ಷ ಉದ್ಯೋಗ ಸೃಜಿಸುವ ಉದ್ದೇಶದಿಂದ ನೂತನ ʻಜವಳಿ ನೀತಿ 2025-30ʼನ್ನು ರೂಪಿಸಲಾಗುವುದು.
- ಉದ್ಯೋಗ ಸೃಜನೆಯೊಂದಿಗೆ ಆರ್ಥಿಕ ಪ್ರಗತಿ ಸಾಧಿಸಲು ರಾಜ್ಯಾದ್ಯಂತ ಜವಳಿ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಹಾಗೂ ಚಿಕ್ಕಮಗಳೂರಿನಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ಪಿ.ಎಂ. ಮಿತ್ರ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ
ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿಯೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1,000 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -LEAP ಅನ್ನು ಪ್ರಾರಂಭಿಸಲಾಗುವುದು. ಇದಕ್ಕೆ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಈ ಕಾರ್ಯಕ್ರಮಗಳಿಂದ ರಾಜ್ಯಾದ್ಯಂತ ಐದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮದಡಿಯಲ್ಲಿ ಕೆಳಗಿನ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:
i)ಮೈಸೂರು, ಮಂಗಳೂರು-ಉಡುಪಿ-ಮಣಿಪಾಲ್, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
ii)ಇನ್ಕ್ಯುಬೇಟರ್‌ಗಳು, ಆಕ್ಸಿಲರೇಟರ್‌ಗಳು, ಉತ್ಕೃಷ್ಟತಾ ಕೇಂದ್ರಗಳು ಮತ್ತು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು (GTC) ಸ್ಥಾಪಿಸಲು ಲೈಫ್‌ಸೈಕಲ್ (Life Cycle) ವಿಧಾನ ಅನುಸರಿಸಲಾಗುವುದು.
iii)ಡೀಪ್-ಟೆಕ್ ಅಭಿವೃದ್ಧಿಗಾಗಿ 100 ಕೋಟಿ ರೂ. ಕಾರ್ಪಸ್ ನಿಧಿ ಹಾಗೂ 300 ಕೋಟಿ ರೂ.ಗಳ Fund of Funds (FoF) ಸ್ಥಾಪಿಸಲಾಗುವುದು.
- ವಾಣಿಜ್ಯೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಅವಿಷ್ಕಾರಕ್ಕೆ ಸಂಬಂಧಿಸಿದ ಜಾಗತಿಕ ಮತ್ತು ರಾಷ್ಟ್ರೀಯ ಸೂಚ್ಯಂಕಗಳಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ಹೊಸ ಉದ್ಯೋಗಗಳನ್ನು ಸೃಜಿಸುವ ಉದ್ದೇಶದಿಂದ ಈ ವಲಯದಲ್ಲಿ ಪ್ರೋತ್ಸಾಹಕಗಳನ್ನೊಳಗೊಂಡ ಅನೇಕ ನೀತಿಗಳನ್ನು ಜಾರಿಗೊಳಿಸಲಾಗಿರುತ್ತದೆ. (ನೀತಿಯ ವಿವರಗಳನ್ನು ಅನುಬಂಧ-೮ರಲ್ಲಿ ಒದಗಿಸಿದೆ).
- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹೊಸ ಐ.ಟಿ ನೀತಿಯನ್ನು 2025ನೇ ಸಾಲಿನಲ್ಲಿ ಜಾರಿಗೊಳಿಸಲಾಗುವುದು. ಕ್ಲೌಡ್ ಕಂಪ್ಯೂಟಿಂಗ್ (Cloud Computing) ಮತ್ತು ನೂತನ ತಂತ್ರಜ್ಞಾನಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ ವಿಸ್ತರಿಸಿ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸುತ್ತದೆ
- ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಕೇತ್ರದಲ್ಲಿ ಪಾರಮ್ಯ ಸಾಧಿಸಲು ಮುಂದಿನ ಐದು ವರ್ಷಗಳಲ್ಲಿ 50 ಕೋಟಿ ರೂ. ಹೂಡಿಕೆಯೊಂದಿಗೆ Centre for Applied AI for Tech Solutions (CATS) ಸ್ಥಾಪಿಸಲಾಗುವುದು. ರಾಜ್ಯವನ್ನು AI ಕ್ಷೇತ್ರದಲ್ಲಿ ಮುಂಚೂಣಿಗೆ ತರಲು ಸರ್ಕಾರ ಬದ್ಧವಾಗಿದೆ.
- ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸಲು ಕ್ವಾಂಟಮ್ ರಿಸರ್ಚ್ ಪಾರ್ಕ್ ಹಂತ-2 ಅನ್ನು ೪8 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸ್ಥಾಪಿಸಲಾಗುವುದು.
- ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029, MSME ಮತ್ತು ದೊಡ್ಡ ಉದ್ಯಮ ವಿಭಾಗದಲ್ಲಿ 1,500 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಉದ್ದೇಶ ಹೊಂದಲಾಗಿದ್ದು, 220 ಕೋಟಿ ರೂ. ಪ್ರೋತ್ಸಾಹದ ಮೂಲಕ ಜಾರಿಗೆ ತರಲಾಗುವುದು.
- ಬೆಂಕಿ ಅನಾಹುತದಲ್ಲಿ ತೀವ್ರ ಹಾನಿ ಸಂಭವಿಸಿದ ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್‌ನ ಪುನರ್ ನಿರ್ಮಾಣಕ್ಕೆ ಒಟ್ಟು 57 ಕೋಟಿ ರೂ. ನೆರವು ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 20 ಕೋಟಿ ರೂ. ಅನುದಾನ ಒದಗಿಸಿದೆ.
- ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ವಲಯದಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು, ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಅನ್ನು ಮೈಸೂರು, ಬೆಳಗಾವಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುವುದು.
- ಕೋಲಾರ, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಒಂಭತ್ತು ಕೋಟಿ ರೂ. ಒದಗಿಸಿದೆ.
- ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಮೈಸೂರಿನ 150 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ Printed Circuit Board (PCB) ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
- ಕರ್ನಾಟಕದಲ್ಲಿ ಸಂವೇದಕಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಕೈಗಾರಿಕೆಗಳ ಮತ್ತು ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಸೆನ್ಸರ್‌ಟೆಕ್ ಇನ್ನೋವೇಶನ್ ಹಬ್, ಒಟ್ಟು 99 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
- ಕಿಯೋನಿಕ್ಸ್ ವತಿಯಿಂದ ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳನ್ನೊಳಗೊಂಡ ಮೂರು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ (GTC) ಗಳನ್ನು ಸ್ಥಾಪಿಸಲಾಗುವುದು.
- ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣದ ಅಗತ್ಯವಿರುವುದರಿಂದ ಕಲಬುರಗಿಯಲ್ಲಿ ಅಗ್ರಿ-ಟೆಕ್ ವೇಗವರ್ಧಕ (Agri-Tech Accelerator) ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕಲಬುರಗಿಯಲ್ಲಿ Plug & Play ಸೌಲಭ್ಯವಿರುವ Flat Factory ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.