ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಗ್ಲಿಷ್‌ ಕಲಿಯಲು ಬೆಂಗಳೂರಿಗೆ ಬಂದ ಜಪಾನ್ ಪ್ರಜೆಗೆ ಅಕ್ರಮ ಜೈಲು ಶಿಕ್ಷೆ; 7 ವರ್ಷಗಳ ಬಳಿಕ ಸಿಕ್ತು ಪರಿಹಾರ

Hirotoshi Tanaka: ಇಂಗ್ಲಿಷ್ ಭಾಷೆ ಕಲಿಯುವ ಆಸೆಯಿಂದ ಬೆಂಗಳೂರಿಗೆ ಬಂದಿದ್ದ ಜಪಾನ್ ಪ್ರಜೆಯೊಬ್ಬರು ಅನಗತ್ಯ ಗೊಂದಲದಿಂದ ಪೋಲಿಸ್ ಪ್ರಕರಣಕ್ಕೆ ಸಿಲುಕಿ 19 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಆಘಾತಕಾರಿ ಘಟನೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಸುದೀರ್ಘ 7 ವರ್ಷಗಳ ಕಾನೂನು ಹೋರಾಟದ ನಂತರ ಕರ್ನಾಟಕ ಸರ್ಕಾರ ಅವರಿಗೆ 75,000 ರುಪಾಯಿ ಪರಿಹಾರ ಒದಗಿಸಿದೆ.

ಜಪಾನ್‌ನ ಹಿರೋತೋಶಿ ತನಕಾ (ಸಂಗ್ರಹ ಚಿತ್ರ)

ಬೆಂಗಳೂರು, ಆ. 24: ಇಂಗ್ಲಿಷ್ ಕಲಿಯುವ ಆಸೆಯಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದ ಜಪಾನ್ ಪ್ರಜೆಯೊಬ್ಬರು ಕ್ಷುಲ್ಲಕ ಜಗಳದ ಕಾರಣಕ್ಕೆ 19 ದಿನಗಳ ಕಾಲ ಅಕ್ರಮವಾಗಿ ಜೈಲು ಶಿಕ್ಷೆ ಅನುಭವಿಸಿ ಬಳಿಕ ಗಡಿಪಾರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಕೊನೆಗೂ ನ್ಯಾಯ ಸಿಕ್ಕಿದೆ. ಸುದೀರ್ಘ 7 ವರ್ಷಗಳ ಕಾನೂನು ಹೋರಾಟದ ನಂತರ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ (KSHRC) ಸೂಚನೆಯಂತೆ ರಾಜ್ಯ ಸರ್ಕಾರವು ಆ ಜಪಾನ್‌ ಪ್ರಜೆಗೆ 75,000 ರುಪಾಯಿ ಪರಿಹಾರ ಧನವನ್ನು ಪಾವತಿಸಿದೆ.

ಜಪಾನ್‌ನ ಶಿಜುವೋಕ ಪ್ರಾಂತ್ಯದ ಹಿರೋತೋಶಿ ತನಕಾ (Hirotoshi Tanaka) ಎಂಬ 37 ವರ್ಷದ ವ್ಯಕ್ತಿ 2019ರಲ್ಲಿ ಇಂಗ್ಲಿಷ್ ಕಲಿಯುವ ಉದ್ದೇಶದಿಂದ ಬೆಂಗಳೂರಿನ ಆರ್‌.ಟಿ. ನಗರದಲ್ಲಿನ ಖಾಸಗಿ ಇಂಗ್ಲಿಷ್ ತರಬೇತಿ ಅಕಾಡೆಮಿಗೆ ಸೇರಿದ್ದರು. ಸಂಸ್ಥೆಯಲ್ಲಿ ಸರಿಯಾಗಿ ತರಗತಿ ನಡೆಯದಿದ್ದಾಗ ಮತ್ತು ಪದೇ ಪದೆ ತರಗತಿ ರದ್ದಾಗುತ್ತಿದ್ದರಿಂದ ಕಿರಿಕಿರಿಗೊಳಗಾದ ತನಕಾ ಅಕಾಡೆಮಿಯ ಡೈರೆಕ್ಟರ್ ಜತೆ ಮಾತುಕತೆ ನಡೆಸಲು ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಸಂಬಂಧ ಪೊಲೀಸರು ತನಕಾ ವಿರುದ್ಧ ಜಾಮೀನು ಸಿಗಬಹುದಾದ ಪ್ರಕರಣಗಳನ್ನು ದಾಖಲಿಸಿ, ಅವರನ್ನು ಬಂಧಿಸಿದ್ದರು.

ಜಪಾನ್‌ ವ್ಯಕ್ತಿಗೆ 7 ವರ್ಷಗಳ ಬಳಿಕ ಸಿಕ್ತು ನ್ಯಾಯ:



ಜಾಮೀನು ಸಿಗುವಂತಹ ಅಪರಾಧವಾಗಿದ್ದರೂ, ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿ 19 ದಿನಗಳ ಕಾಲ ಅನಗತ್ಯವಾಗಿ ಸೆರೆಯಲ್ಲಿ ಇರಿಸಲಾಗಿತ್ತು. ನಂತರ ಅವರನ್ನು ಡಿಟೆನ್ಶನ್ ಸೆಂಟರ್‌ಗೆ ಸ್ಥಳಾಂತರಿಸಿ, 2021ರಲ್ಲಿ ಜಪಾನ್‌ಗೆ ಗಡಿಪಾರು ಮಾಡಲಾಗಿತ್ತು. ತಮಗಾದ ಅನ್ಯಾಯದ ವಿರುದ್ಧ ತನಕಾ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಆಪಾನ್‌ಗೆ ಮರಳಿದ ನಂತರವೂ ತಮ್ಮ ಭಾರತೀಯ ವಕೀಲರ ಮೂಲಕ ಈ ಪ್ರಕರಣವನ್ನು ನಿರಂತರವಾಗಿ ನಡೆಸುತ್ತಿದ್ದರು. ವಿಚಾರಣೆ ನಡೆಸಿದ ಕೆಎಸ್‌ಎಚ್‌ಆರ್‌ಸಿ, ಜಾಮೀನು ಲಭಿಸುವ ಸಣ್ಣ ಪ್ರಕರಣಗಳಿದ್ದರೂ ಪೊಲೀಸರು ತನಕಾ ಅವರನ್ನು 19 ದಿನಗಳ ಕಾಲ ಅನಗತ್ಯವಾಗಿ ಜಗೈಲಿನಲ್ಲಿಟ್ಟು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಿತು. ನಂತರ ತನಕಾ ಅವರಿಗೆ 75 ಸಾವಿರ ರುಪಾಯಿ ಪರಿಹಾರ ನೀಡುವಂತೆ ಹಾಗೂ ಕಾರಣಕರ್ತರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆಯೋಗ ಸೂಚಿಸಿತು.

ಮಂಡ್ಯದಲ್ಲಿ ಮೃತಪಟ್ಟ ಭಿಕ್ಷುಕಿ ಮನೆಯಲ್ಲಿ ಮೂಟೆಗಟ್ಟಲೆ ಹಣ!

ಆಯೋಗದ ನಿರ್ದೇಶನದಂತೆ ಕರ್ನಾಟಕ ಸರ್ಕಾರದಿಂದ ಬಿಡುಗಡೆಯಾದ ಪರಿಹಾರದ ಹಣ ವಕೀಲರ ಮೂಲಕ ತನಕಾ ಅವರಿಗೆ ತಲುಪಿದೆ. ‘ʼನನ್ನ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಭಾರತೀಯ ವಕೀಲರಿಗೆ ಜೂನ್ 22ರಂದು ಪೊಲೀಸರು 75,000 ಪರಿಹಾರ ಧನ ನೀಡಿದ್ದಾರೆ. ಆ ಹಣವನ್ನು ನನ್ನ ವಕೀಲರು ಜೂನ್ 23ರಂದು ಭಾರತ ಮೂಲದ ನನ್ನ ಪತ್ನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ'’ ಎಂದು ತನಕಾ ತಿಳಿಸಿದ್ದಾರೆ.

ಈ ಬೆಳವಣಿಗೆಯ ನಡುವೆ, ಬೆಂಗಳೂರಿನಲ್ಲಿದ್ದಾಗ ಪರಿಚಯವಾದ ಈಶಾನ್ಯ ಭಾರತದ ಮಹಿಳೆಯೊಬ್ಬರನ್ನು ತನಕಾ ಮದುವೆಯಾಗಿದ್ದಾರೆ. ʼʼವಿದೇಶಿ ಪ್ರಜೆಗಳ ಜತೆ ಪೊಲೀಸರು ಸರಿಯಾಗಿ ನಡೆದುಕೊಳ್ಳಬೇಕುʼʼ ಎಂದು ತನಕಾ ಸಲಹೆ ನೀಡಿದ್ದಾರೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author