ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಅವರನ್ನು ಉಚ್ಚಾಟಿಸಲು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ತೀರ್ಮಾನಿಸಿದೆ. ಟ್ರಸ್ಟ್ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು, ಸ್ವಾಮೀಜಿ ದಾವಣಗೆರೆ ಹಾಗೂ ಇತರೆ ಕಡೆ ಆಸ್ತಿ ಮಾಡಿದ್ದಾರೆ. ಹಾಗೆಯೇ ಲಿಂಗಾಯತ ತತ್ವ ಬಿಟ್ಟು ಹಿಂದುತ್ವ ಪರ ಹೊರಟಿದ್ದಾರೆ. ಟ್ರಸ್ಟ್ ಸದಸ್ಯರ ಮಾತು ಕೇಳುತ್ತಿಲ್ಲ. ಪೀಠದಲ್ಲಿ ಇರೋದಿಲ್ಲ, ಒಂದು ಪಕ್ಷದ ಪರ ಹೊರಟಿದ್ದಾರೆ. ಸ್ವಾಮೀಜಿಗಳು ಸ್ವಾಮೀಜಿಗಳಾಗಿ ಉಳಿದಿಲ್ಲ. ಹೀಗೆ ಅನೇಕ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದರು.
ಟ್ರಸ್ಟ್‌ನ 30 ಜನರ ಒಮ್ಮತದ ನಿರ್ಣಯದ ಮೇರೆಗೆ ಉಚ್ಚಾಟನೆ ಮಾಡಲಾಗಿದೆ. ಅವರಿಗೆ ಕಾರು ಸೇರಿ ಎಲ್ಲವನ್ನೂ ಕೊಡಿಸಿದ್ದೇವೆ. ಆದರೆ ಸ್ವಾಮೀಜಿ ಬಸವತತ್ವಕ್ಕೆ ವಿರುದ್ಧ ಮಾತನಾಡಿದ್ದಾರೆ. ಬಸವತತ್ವ ನಾವು ಯಾವತ್ತೂ ಹಿಂದೂ ಎನ್ನುವುದಿಲ್ಲ. ಹಿಂದೂ ಧರ್ಮದ ವಿರುದ್ಧವೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ ಅಂತ ಅಸೂಟಿ ತಿಳಿಸಿದರು.
ಇನ್ನುಮುಂದೆ ಮಠಕ್ಕೂ, ಸ್ವಾಮೀಜಿಗೂ ಸಂಬಂಧವಿಲ್ಲ. ಮಲಪ್ರಭಾ ದಂಡೆ ಮೇಲೆ ಬೇರೆ ಮಠ ಕಟ್ಟುತ್ತೇವೆ ಎಂದು ಸಿಸಿ ಪಾಟೀಲ್ ಹೇಳಿದ್ದಾರೆ, ಕಟ್ಟಿಕೊಳ್ಳಲಿ. ನಮ್ಮ ಮಠಕ್ಕೆ ಮುಂದೆ ಬೇರೆ ಪೀಠಾಧಿಪತಿ ನೇಮಕ ಮಾಡುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Caste Census: ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಗೆ ಮಾನ್ಯತೆಯೇ ಇಲ್ಲ: ಸಚಿವ ಪ್ರಲ್ಹಾದ್ ಜೋಶಿ
ಕಾಶಪ್ಪನವರ್‌ನ ಬೆಂಬಲಿಸಲಿಲ್ಲ ಎಂದು ಉಚ್ಚಾಟನೆ ಆಯ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಸೂಟಿ, ರಾಜಕೀಯದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಕಾಶಪ್ಪನವರ್ ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಗೆದ್ದೇ ಗೆಲ್ಲುತ್ತಾರೆ ಎಂದು ತಿಳಿಸಿದರು.