ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯ ಸರ್ಕಾರ ತಕ್ಷಣವೇ ರೈತರ ನೆರವಿಗೆ ಧಾವಿಸಲಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

Nikhil Kumaraswamy: ಮಳೆಯ ಅಭಾವದಿಂದ ರೈತರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ. ಬಿತ್ತನೆ ಮಾಡಲು ಸಾಧ್ಯವಾಗಿಲ್ಲ, ಮಾಡಿದ ಬೆಳೆ ಕೂಡ ಒಣಗಿ ಹೋಗುತ್ತಿದೆ. ಕುಡಿಯಲು ನೀರಿಲ್ಲ, ಬೆಳೆಗೆ ನೀರಿಲ್ಲ. ರೈತರ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರ ಕಣ್ಣು, ಮೂಗು, ಬಾಯಿ ಮುಚ್ಚಿಕೊಂಡು ಕುಳಿತಿದೆ. ಇದು ರೈತ ವಿರೋಧಿ ಧೋರಣೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾದಾಮಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಕೃಷಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸಿ ರೈತರ ಅಳಲನ್ನು ಆಲಿಸಿದ ಜೆಡಿಎಸ್‌ ನೆರೆ ಮತ್ತು ಬರ ಅಧ್ಯಯನ ತಂಡ.

ಬಾಗಲಕೋಟೆ, ಜು.15: ಜೆಡಿಎಸ್ ಪಕ್ಷದ (JDS Party) ವತಿಯಿಂದ ರಚಿಸಲಾದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡವು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಹಲಕುರ್ಕಿ, ಕೊಂಕನಕೊಪ್ಪ, ಹಂಗರಗಿ ಹಾಗೂ ಖಾಜಿಬೂದಿಹಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕೃಷಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸಿ ರೈತರ ಅಳಲನ್ನು ಆಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ʼಮಳೆಯ ಅಭಾವದಿಂದ ರೈತರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ. ಬಿತ್ತನೆ ಮಾಡಲು ಸಾಧ್ಯವಾಗಿಲ್ಲ, ಮಾಡಿದ ಬೆಳೆ ಕೂಡ ಒಣಗಿ ಹೋಗುತ್ತಿದೆ. ಕುಡಿಯಲು ನೀರಿಲ್ಲ, ಬೆಳೆಗೆ ನೀರಿಲ್ಲ. ರೈತರ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರ ಕಣ್ಣು, ಮೂಗು, ಬಾಯಿ ಮುಚ್ಚಿಕೊಂಡು ಕುಳಿತಿದೆ. ಇದು ರೈತ ವಿರೋಧಿ ಧೋರಣೆ. ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ಬರಪೀಡಿತ ಪ್ರದೇಶ ಘೋಷಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ಜೆಡಿಎಸ್ ರೈತರ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆʼ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಳೆಯ ಅಭಾವದಿಂದಾಗಿ ರೈತರು ಬಿತ್ತನೆಯನ್ನೇ ಮಾಡಿಲ್ಲ. ಕೆಲವರು ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆ ಕೂಡ ನೀರಿಲ್ಲದೆ ಒಣಗುತ್ತಿದೆ. ಕುಡಿಯಲು ನೀರಿಲ್ಲ, ಕೃಷಿಗೆ ನೀರಿಲ್ಲ, ಸಾಲ ತೀರಿಸಲು ಮಾರ್ಗವಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರಕ್ಕೆ 3 ಪ್ರಮುಖ ಒತ್ತಾಯ

  • ಬಾದಾಮಿ ಸೇರಿದಂತೆ ಇಡೀ ಬಾಗಲಕೋಟೆ ಜಿಲ್ಲೆಯನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು.
  • ಬರ ಪರಿಹಾರ ಹಣವನ್ನು ಯಾವುದೇ ವಿಳಂಬವಿಲ್ಲದೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು.
  • ರೈತರ ಮೇಲಿನ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ, ಮುಂದಿನ ಸಾಲಕ್ಕೆ ಬಡ್ಡಿ ಸಡಿಲಿಕೆ ನೀಡಬೇಕು.

ಅಧ್ಯಯನ ತಂಡದ ವರದಿಯನ್ನು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.‌

Bidadi Township: ನಾನು ಮಂಡಲಹಳ್ಳಿಗೆ ಹೋಗುತ್ತೇನೆ, ತಾಕತ್ತಿದ್ರೆ ನನ್ನ ವಿರುದ್ಧ ಎಫ್ಐಆರ್ ಮಾಡಿ: ಎಚ್‌.ಡಿ. ಕುಮಾರಸ್ವಾಮಿ ಸವಾಲು

ಈ ಸಂದರ್ಭದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣರೆಡ್ಡಿ, ಶಾಸಕ ಶರಣಗೌಡ ಪಾಟೀಲ್ ಕಂದಕೂರ್, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮುಖಂಡರಾದ ದೊಡ್ಡನಗೌಡ ಪಾಟೀಲ್ ನರಿಬೋಳ್, ಹನಮಂತಪ್ಪ ಮಾವಿನಮರದ, ಸಿ.ವಿ. ಚಂದ್ರಶೇಖರ್ ಸೇರಿದಂತೆ ಪಕ್ಷದ ಹಿರಿಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.