ಕಲಬುರಗಿ, ಆ. 31: ಬೀದಿ ನಾಯಿ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಆಟವಾಡುತ್ತಿದ್ದ ವೇಳೆ ಬೀದಿ ನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡ ನಾಲ್ಕು ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಗರದ ದರಿಯಾಪುರ–ಕೋಟನೂರ ಬಡಾವಣೆಯಲ್ಲಿ ನಡೆದಿದೆ (Stray Dog Attack). ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪ ಪೂಜಾರಿ ಅವರ ಪುತ್ರ ಮನೋಜ್ ಪೂಜಾರಿ ಜಂಬಗಾ (4) ಮೃತ ಬಾಲಕ.
ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿರುವ ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಮನೋಜ್ ಆಟವಾಡುತ್ತಿದ್ದಾಗ ಬೀದಿ ನಾಯಿ ಏಕಾಏಕಿ ದಾಳಿ ನಡೆಸಿತ್ತು. ದಾಳಿಯಿಂದ ಬಾಲಕನಿಗೆ ಗಂಭೀರ ಗಾಯಗಳಾಗಿತ್ತು. ಘಟನೆಯ ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರು ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಮೃತ ಬಾಲಕನ ತಂದೆ ಶರಣಬಸಪ್ಪ ಪೂಜಾರಿ ಕಲಬುರಗಿ ನಗರದಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಾಲಕನ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮತ್ತು ದುಃಖ ಮಡುಗಟ್ಟಿದೆ. ಕೋಟನೂರ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ 3 ವರ್ಷದ ಬಾಲಕ ಮೇಲೆ ದಾಳಿ ಮಾಡಿ 30 ಮೀಟರ್ ದೂರ ಎಳೆದೊಯ್ದ ಬೀದಿ ನಾಯಿ
ಕಲಬುರಗಿಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದ್ದು, ಒಂದೇ ದಿನ ನಾಲ್ವರು ಪಾದಚಾರಿಗಳ ಮೇಲೆ ನಾಯಿ ದಾಳಿ ನಡೆಸಿದ ಘಟನೆ ಇತ್ತೀಚೆಗೆ ವೆಂಕಟೇಶ ನಗರದಲ್ಲಿ ನಡೆದಿತ್ತು. ರಸ್ತೆಯಲ್ಲಿ ತೆರಳುತ್ತಿದ್ದ ನಾಲ್ವರು ಪಾದಚಾರಿಗಳ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಕಣ್ಣು, ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿದ್ದವು.
ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಪ್ರಮುಖ ರಸ್ತೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು, ಮಕ್ಕಳು, ವೃದ್ಧರು ಹಾಗೂ ಪಾದಚಾರಿಗಳು ಹೊರಗೆ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪುರಸಭೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಾಯಿಗಳ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬೀದಿ ನಾಯಿಗೆ ಮತ್ತೊಂದು ಬಲಿ; ಥಾಣೆಯಲ್ಲಿ ಬಾಲಕನನ್ನು ಕಚ್ಚಿ ಕೊಂದ ರಕ್ಕಸ ಶ್ವಾನ
ಬಾಲಕಿಗೆ ಗಂಭೀರ ಗಾಯ
ಸೆಪ್ಟೆಂಬರ್ನಲ್ಲಿ ಮನೆ ಬಳಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳ ದಾಳಿಗೊಳಗಾಗಿ 4 ವರ್ಷದ ಬಾಲಕಿಯೊಬ್ಬಳು ಗಂಭೀರ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೀನಹಬಲ್ ಗ್ರಾಮದಲ್ಲಿ ನಡೆದಿತ್ತು. ಬಾಲಕಿ ಸಾನ್ವಿಯ ಮುಖದಲ್ಲಿ ಆಳವಾದ ಗಾಯಗಳಾಗಿದ್ದವು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.