ಕಲಬುರಗಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ (IPL Betting) ಭಾರಿ ನಷ್ಟವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲೆಯ (Kalaburagi News) ನಾಗೂರ ಬಳಿ ನಡೆದಿದೆ. ಜೂಜಿನಲ್ಲಿ ಹಣ ಕಳೆದುಕೊಂಡು, ಸಾಲಗಾರರ ಕಿರುಕುಳಕ್ಕೆ ಬೇಸತ್ತು ಕಾಳಗಿ ತಾಲೂಕಿನ ರುಮ್ಮನಗೂಡ್ ನಿವಾಸಿ ಚಂದ್ರಕಾಂತ ದೇಸಾಯಿ (40) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ಮೇಲೆ ನಿರಂತರವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದರು ಎನ್ನಲಾಗಿದೆ. ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಚಂದ್ರಕಾಂತ ತನ್ನ ಬಳಿಯಿದ್ದ ಹಣವನ್ನೆಲ್ಲಾ ಕಳೆದುಕೊಂಡಿದ್ದಲ್ಲದೆ, ಜೂಜಿಗಾಗಿ ಹಲವರಿಂದ ದೊಡ್ಡ ಮೊತ್ತದ ಸಾಲವನ್ನೂ ಮಾಡಿದ್ದರು. ಬೆಟ್ಟಿಂಗ್‌ನಲ್ಲಿ ಹಣ ಕೈಕೊಟ್ಟಿದ್ದರಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇತ್ತ ಸಾಲಗಾರರು ಹಣ ವಾಪಸ್ ನೀಡುವಂತೆ ಒತ್ತಡ ಹೇರುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಾಗೂರ ಸೇತುವೆ ಬಳಿ ತಲುಪಿದ ಚಂದ್ರಕಾಂತ ಅವರು ತಮ್ಮ ಬೈಕ್ ಮತ್ತು ಮೊಬೈಲ್ ಫೋನ್ ಅನ್ನು ಸೇತುವೆಯ ಮೇಲೆಯೇ ಬಿಟ್ಟು, ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಜಿಗಿದಿದ್ದಾರೆ. ಸ್ಥಳದಲ್ಲಿ ಬೈಕ್ ಮತ್ತು ಮೊಬೈಲ್ ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.