ಕಲಬುರಗಿ: ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತ ಹಾಗೂ ಬಲಗೈ ಬಂಟನೆಂದು ಹೇಳಲಾಗುತ್ತಿರುವ ಅಫಜಲಪುರದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಕಲಬುರಗಿ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಕೈಯಲ್ಲಿ ಗನ್ ಹಿಡಿದು ‘ಧುರಂಧರ್’ ಹಾಡಿಗೆ ಡ್ಯಾನ್ಸ್ ಮಾಡಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಮಾರಂಭದ ವೇಳೆ ಕಾಂಗ್ರೆಸ್ ಮುಖಂಡ ಕೈಯಲ್ಲಿ ಗನ್ ಹಿಡಿದು ವೇದಿಕೆಯ ಮೇಲೆ ಕುಣಿದು ಬಿಲ್ಡಪ್ ನೀಡಿದ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಲಬುರಗಿ ನಗರದಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಅನೇಕ ಅತಿಥಿಗಳು ಉಪಸ್ಥಿತರಿದ್ದು, ಅವರ ಎದುರಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮದುವೆ ಕಾರ್ಯಕ್ರಮದಲ್ಲಿ ಸಂಗೀತದ ನಡುವೆಯೇ ಗನ್ ಹಿಡಿದು ವೇದಿಕೆಯ ಮೇಲೆ ಕುಣಿದಿರುವುದು ಹಾಗೂ ಕೆಲವರು ಅವರೊಂದಿಗೆ ಫೋಟೊ ಮತ್ತು ವಿಡಿಯೊಗಳನ್ನು ತೆಗೆದುಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ.
ಕಲಬುರಗಿ ಗನ್ ಮತ್ತು ಡ್ರಗ್ಸ್ ಮಾಫಿಯಾದ ತವರೂರಾಗಿದೆ ಎಂದ ಬಿಜೆಪಿ
ಘಟನೆ ಬಗ್ಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿ, ಕಲಬುರಗಿಯಲ್ಲಿ ಕಾನೂನು ಸತ್ತಿದೆ. ಇದು 'ರಿಪಬ್ಲಿಕ್ ಆಫ್ ಕಲಬುರಗಿ'. ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ಮತೀನ್ ಪಟೇಲ್, ಸಾರ್ವಜನಿಕವಾಗಿ ಪಿಸ್ತೂಲ್ ಪ್ರದರ್ಶಿಸುತ್ತಾ ದರ್ಪ ಮೆರೆದಿದ್ದಾನೆ. ಇದು ಮಲ್ಲಿಕಾರ್ಜುನ ಖರ್ಗೆ ಕಪಿಮುಷ್ಠಿಯಲ್ಲಿರುವ ಕಲಬುರಗಿಯ ನೈಜ ಚಿತ್ರಣ.
ಇಂದು ಕಲಬುರಗಿ ಗನ್ ಮತ್ತು ಡ್ರಗ್ಸ್ ಮಾಫಿಯಾದ ತವರೂರಾಗಿದೆ. ರೌಡಿಗಳು, ಪುಂಡರು ರಾಜಾರೋಷವಾಗಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಅಸಮರ್ಥ ಪ್ರಿಯಾಂಕ್ ಖರ್ಗೆ ಅವರೇ, ಇದೇನಾ ನಿಮ್ಮ ಆಡಳಿತದ ಮಾಡೆಲ್? ನೀವೇ ಅಧಿಕಾರದ ಮದದಲ್ಲಿ ತೇಲುತ್ತಿರುವಾಗ, ನಿಮ್ಮ ಆಪ್ತರಿಗೆ ಕಡಿವಾಣ ಹಾಕುವವರು ಯಾರು? ಎಂದು ಪ್ರಶ್ನಿಸಿದ್ದಾರೆ.