ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ರಿಲೀಫ್: ಅಮಾನತು ಆದೇಶಕ್ಕೆ ತಡೆ

RSS Route March: ಕಳೆದ ವರ್ಷ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಾನತುಗೊಂಡ ಇಬ್ಬರು ಶಿಕ್ಷಕರಿಗೆ ರಿಲೀಫ್‌ ಸಿಕ್ಕಿದೆ. ರಾಜ್ಯದ ಸರ್ಕಾರದ ಅಮಾನತು ಆದೇಶಕ್ಕೆ ಕಲಬುರಗಿ ಕೆಎಟಿ ತಡೆ ನೀಡಿದೆ. ಆ ಮೂಲಕ ಯಾದಗಿರಿ ಜಿಲ್ಲೆಯ ಇಬ್ಬರು ಶಿಕ್ಷಕರಾದ ಗುರುರಾಜ್ ಜೋಶಿ ಮತ್ತು ಅಣ್ಣಾ ಸಾಹೇಬ್ ದೇಶಮುಖ್ ಅವರಿಗೆ ರಿಲೀಫ್‌ ಸಿಕ್ಕಿದೆ.

ಸಾಂದರ್ಭಿಕ ಚಿತ್ರ

ಕಲಬುರಗಿ, ಸೆ. 3: ಆರ್​​​ಎಸ್​​ಎಸ್​ ಪಥಸಂಚಲನದಲ್ಲಿ (RSS Route March) ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಇಬ್ಬರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅಮಾನತುಗೊಳಿಸಿದ್ದ ಆದೇಶಕ್ಕೆ ಕಲಬುರಗಿ ಕೆಎಟಿ (ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ) ತಡೆ ನೀಡಿದೆ. ಆರ್‌ಎಸ್‌ಎಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಯಾದಗಿರಿ ಜಿಲ್ಲೆಯ ಇಬ್ಬರು ಶಿಕ್ಷಕರಾದ ಗುರುರಾಜ್ ಜೋಶಿ ಮತ್ತು ಅಣ್ಣಾ ಸಾಹೇಬ್ ದೇಶಮುಖ್ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿತ್ತು. ಈ ಅಮಾನತು ಆದೇಶಕ್ಕೆ ಗುರುವಾರ (ಸೆಪ್ಟೆಂಬರ್ 3) ಕೆಎಟಿ ತಡೆಯಾಜ್ಞೆ ನೀಡಿದೆ.

2025ರ ಅಕ್ಟೋಬರ್ 10ರಂದು ಜರುಗಿದ ಆರ್‌ಎಸ್‌ಎಸ್‌ನ ಪಥ ಸಂಚಲನದಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಗುರುರಾಜ ಜೋಶಿ ಹಾಗೂ ಕುಪ್ಪಿ ಶಾಲೆಯ ಶಿಕ್ಷಕ ಅಣ್ಣಾ ಸಾಹೇಬ ದೇಶಮುಖ ಗಣಾವೇಶ ಧರಿಸಿ ಪಾಲ್ಗೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಶಿಕ್ಷಕರನ್ನು ಅಮಾನತು ಮಾಡುವಂತೆ ಸೂಚಿಸಿತ್ತು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಇನ್ನು ಈ ಅಮಾನತು ಆದೇಶ ಪ್ರಶ್ನಿಸಿ ಇಬ್ಬರು ಶಿಕ್ಷಕರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ಕಲಬುರಗಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಶಿಕ್ಷಕರ ಅಮಾನತು ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ.

ಆರ್‌ಎಸ್‌ಎಸ್ ಮೆರವಣಿಗೆಯಲ್ಲಿ ಭಾಗವಹಿಸಿದ ಶಿಕ್ಷಕರ ಅಮಾನತು: ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ

ಖಂಡಿಸಿದ್ದ ಕೇಂದ್ರ ಸಚಿವ ಜೋಶಿ

ʼʼಆರ್‌ಎಸ್‌ಎಸ್ ಮೆರವಣಿಗೆಗಳಲ್ಲಿ ಭಾಗವಹಿಸಿದ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು ಅಮಾನತುಗೊಳಿಸುವ ಮೂಲಕ ಕರ್ನಾಟಕ ಸರ್ಕಾರವು ದ್ವೇಷದಿಂದ ವರ್ತಿಸುತ್ತಿದೆʼʼ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದರು. ಈ ಕ್ರಮವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದರು. ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ಟೀಕಿಸಿದ್ದರೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು. ಇದು ಅತ್ಯಂತ ಆಕ್ಷೇಪಾರ್ಹ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದ್ದರು.

ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವ ಪ್ರಯತ್ನಗಳನ್ನು ನ್ಯಾಯಾಲಯಗಳು ಈ ಹಿಂದೆಯೇ ರದ್ದುಗೊಳಿಸಿವೆ ಎಂದು ಜೋಶಿ ನೆನಪಿಸಿದ್ದರು. 10 ಅಥವಾ 12 ವರ್ಷಗಳಲ್ಲಿ ಮಾತ್ರವಲ್ಲ, 1970 ಮತ್ತು 1980ರ ದಶಕದಿಂದಲೂ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಸಂಘದ ಚಟುವಟಿಕೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಡೆಯಲು ಅಥವಾ ನಿರ್ಬಂಧಿಸಲು ಪ್ರಯತ್ನಿಸಿದಾಗಲೆಲ್ಲ ನ್ಯಾಯಾಲಯಗಳು ಅವುಗಳನ್ನು ರದ್ದುಗೊಳಿಸಿವೆ ಎಂದು ಅವರು ತಿಳಿಸಿದ್ದರು.

ಪಂಜಾಬ್‌ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಸರ್ಕಾರ ದ್ವೇಷದಿಂದ ವರ್ತಿಸುತ್ತಿದೆ ಎಂದು ದೂರಿದ್ದ ಜೋಶಿ, ಅಂತಹ ಸೇಡಿನ ಮನೋಭಾವವನ್ನು ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು. ‌

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸರ್ಕಾರದ ಅನುಮತಿ ಕಡ್ಡಾಯ: ಪ್ರಿಯಾಂಕ್ ಖರ್ಗೆ

ನೋಟಿಸ್‌ಗೆ ಉತ್ತರಿಸಿದ್ದ ಶಿಕ್ಷಕರು

ಕಾರಣ ಕೇಳಿ ನೋಟಿಸ್‌ಗೆ ಉತ್ತರಿಸಿದ್ದ ಶಿಕ್ಷಕರಾದ ಗುರುರಾಜ ಜೋಶಿ ಹಾಗೂ ಅಣ್ಣಾಸಾಹೇಬ ದೇಶಮುಖ, ಆರ್‌ಎಸ್‌ಎಸ್‌ ಪಥಸಂಚಲನವು ಕೆಲಸದ ವೇಳೆಯಲ್ಲಿ ನಡೆದಿಲ್ಲ, ಅದು ರಾಜಕೀಯ ಕಾರ್ಯಕ್ರಮ ಆಗಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದರಿಂದ ಭಾಗವಹಿಸಿದ್ದಾಗಿ ತಿಳಿಸಿದ್ದರು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author