ಕಲಬುರಗಿ: ಒಡ ಹುಟ್ಟಿದ ಸಹೋದರನಿಗೇ ವಂಚನೆ ಮಾಡಿರುವ ಗಂಭೀರ ಆರೋಪ ಬಿಜೆಪಿ ಎಂಎಲ್‌ಸಿ ಹಾಗೂ ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶೀಲ್ ನಮೋಶಿ (MLC Shashil G Namoshi) ಅವರ ವಿರುದ್ಧ ಕೇಳಿಬಂದಿದೆ. ತಮ್ಮನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ರಾತ್ರಿಯಿಡೀ ರಸ್ತೆಯಲ್ಲೇ ಕಾಲ ಕಳೆಯುವಂತೆ ಮಾಡಿದ್ದಾರೆ ಎಂದು ಸಹೋದರ ಅನಿಲ್ ನಮೋಶಿ ಆರೋಪಿಸಿದ್ದಾರೆ.
ಹೈದರಾಬಾದ್‌ನಲ್ಲಿ ಕುಟುಂಬದ ಜತೆ ಅನಿಲ್ ನಮೋಶಿ ನೆಲೆಸಿದ್ದರು. ವೈದ್ಯಕೀಯ ವೃತ್ತಿಯಿಂದ ನೆನ್ನೆ ನಿವೃತ್ತಿ ಹೊಂದಿದ್ದ ಹಿನ್ನೆಲೆ ನಗರಕ್ಕೆ ವಾಪಾಸ್ಸಾಗಿದ್ದರು. ಆದರೆ, ಮನೆಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕಲಬುರಗಿಯ ಆನಂದ ನಗರದ ಶಶೀಲ್ ನಮೋಶಿ ವಾಸವಿರುವ ಮನೆ ಮುಂಭಾಗದಲ್ಲೇ ವಸ್ತುಗಳನ್ನು ಇಟ್ಟುಕೊಂಡು ಅನಿಲ್ ನಮೋಶಿ ಕುಟುಂಬ ಕಾಲ ಕಳೆದಿದೆ.
ಸದ್ಯ ಶಶೀಲ್ ನಮೋಶಿ ವಾಸವಾಗಿರುವ ಮನೆ ನಮಗೆ ಸೇರಿದ್ದು ಎಂದು ಅನಿಲ್ ನಮೋಶಿ ಹೇಳಿದ್ದು, ದಾಖಲೆ ಪತ್ರಗಳೆಲ್ಲಾ ನನ್ನ ಮತ್ತು ನನ್ನ ತಾಯಿಯ ಹೆಸರಿನಲ್ಲಿ ಇದೆ. ಶಶೀಲ್ ಪಾಲಿಗೆ ಬಂದಿದ್ದ ಸೈಟ್ ಈ ಹಿಂದೆಯೇ ಮಾರಾಟ ಮಾಡಿದ್ದ. ಬಳಿಕ ನಮ್ಮ ಸೈಟ್‌ನಲ್ಲೇ ಇಬ್ಬರೂ ಸೇರಿ ಮನೆ ಕಟ್ಟಿಸಿದ್ದೆವು. ಆದರೆ ಇದೀಗ ನಮ್ಮ ಮನೆಯೊಳಗೆ ನಮ್ಮನ್ನೇ ಬಿಟ್ಟುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಎಂಎಲ್‌ಸಿ ಶಶೀಲ್ ನಮೋಶಿ ಸ್ಪಷ್ಟನೆ ಏನು?
ವಂಚನೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಲ್‌ಸಿ ಶಶೀಲ್ ನಮೋಶಿ ಅವರು, ಈ ಆಸ್ತಿಯಲ್ಲಿ ಅರ್ಧ ಭಾಗ ನನ್ನದು ಹಾಗೂ ಉಳಿದ ಅರ್ಧ ನನ್ನ ಸಹೋದರನದ್ದು ಆಗಿದೆ. ಈ ಹಿಂದೆ ನಮ್ಮ ಸಹೋದರ ನನ್ನನ್ನು ಮನೆಯಿಂದ ಹೊರಹಾಕಿದ್ದರು. ನಂತರ ನನಗೆ ಮನೆ ಇಲ್ಲದ ಕಾರಣ, ಅವರ ಅನುಮತಿ ಮೇರೆಗೆ ಸೈಟಿನಲ್ಲಿ ಮನೆ ಕಟ್ಟಿದ್ದೆ. ಕಟ್ಟಡ ನಿರ್ಮಾಣದ ಎಲ್ಲಾ ಖರ್ಚು ನಾನೇ ಭರಿಸಿದ್ದೆ. ನನ್ನ ಹೆಸರಿನಲ್ಲೇ ಇ-ಖಾತಾ ಇದೆ. 27 ವರ್ಷದಿಂದ ನಾನು ಇದೇ ಮನೆಯಲ್ಲಿ ಇದ್ದೇನೆ. ಈಗ ಬಂದು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಕೋರ್ಟ್‌ಗೆ ಹೋಗಲಿ, ನ್ಯಾಯಾಲಯ ಏನು ತೀರ್ಪು ನೀಡುತ್ತದೋ ಅದಕ್ಕೆ ನಾನು ತಲೆಬಾಗುವೆ ಎಂದು ತಿಳಿಸಿದ್ದಾರೆ.