ಕಲಬುರಗಿ: ಮಕ್ಕಳಾಗದಿದ್ದಕ್ಕೆ ಹಾಗೂ ತವರು ಮನೆಯಿಂದ ಹಣ ತರಲಿಲ್ಲ ಎಂಬ ಕಾರಣಕ್ಕೆ ಜಗಳ ತೆಗೆದು ಪತಿಯೊಬ್ಬ ಹೆಂಡತಿಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ವರದಿಯಾಗಿದೆ.
ಚಿಂಚೋಳಿ ಪಟ್ಟಣದ ಪ್ರಿಯಾಂಕಾ ಹಡಪದ್ (30) ಮೃತಪಟ್ಟ ಮಹಿಳೆ. ವೃತ್ತಿಯಲ್ಲಿ ವಕೀಲನಾಗಿದ್ದ ಸೂರ್ಯಕಾಂತ್ ಎಂಬಾತನೇ ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಪತಿ ಮುಂದಾಗಿದ್ದ.
ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಸೂರ್ಯಕಾಂತ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸೂರ್ಯಕಾಂತ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಸೂರ್ಯಕಾಂತ್ ಪ್ರಯತ್ನಿಸಿದ್ದಾನೆ ಎಂದು ಪ್ರಿಯಾಂಕಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಿಯಾಂಕಾ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೂರ್ಯಕಾಂತ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.