ಕಲಬುರಗಿ, ಮೇ 2: ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ (Kalaburagi News) ಸೇವೆ ಸಲ್ಲಿಸಿದ ಫೌಜಿಯಾ ತರನ್ನುಮ್ ಬಿ. ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ಮಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
2015ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಫೌಜಿಯಾ ತರನ್ನುಮ್ ಅವರು ಕಲಬುರಗಿ ಜಿಲ್ಲಾಧಿಕಾರಿಯಾಗಿ ಮೂರು ವರ್ಷಗಳ ಕಾಲ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಆಡಳಿತದಲ್ಲಿ ಚುರುಕು ಮುಟ್ಟಿಸಿದ್ದ ಅವರು, ಪ್ರಮುಖವಾಗಿ ಕುಡಿಯುವ ನೀರು, ಅಭಿವೃದ್ಧಿ ಕಾಮಗಾರಿ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಮೆಚ್ಚುಗೆ ಗಳಿಸಿದ್ದರು. ಇದೀಗ ಅವರನ್ನು ಬೆಂಗಳೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.
ನೂತನ ಜಿಲ್ಲಾಧಿಕಾರಿ ಪರಿಚಯ
ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವ ಮಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರು 2016ರ ಬ್ಯಾಚ್‌ನ ಕರ್ನಾಟಕ ಕೆಡರ್ ಐಎಎಸ್ ಅಧಿಕಾರಿಯಾಗಿದ್ದಾರೆ. ವರ್ಜೀನಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪದವೀಧರರಾದ ಇವರು, ಈ ಹಿಂದೆ ಸಹಾಯಕ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸರ್ಕಾರದ ಆಯವ್ಯಯ ಮತ್ತು ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಹೊಸ ಆದೇಶದನ್ವಯ ಇವರು ತಕ್ಷಣವೇ ಜಾರಿಗೆ ಬರುವಂತೆ ಕಲಬುರಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.