ಕಲಬುರಗಿ, ಫೆ.18: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಗುರುವಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಯಿತು. ಸುಮಾರು 1 ಗಂಟೆ 45 ನಿಮಿಷ ತಡವಾಗಿ ಆರಂಭವಾದ ಸಭೆಯನ್ನು ಬಿಜೆಪಿ ಸದಸ್ಯರು ಸಂಪೂರ್ಣವಾಗಿ ಬಹಿಷ್ಕರಿಸಿದ್ದು, ವಿರೋಧ ಪಕ್ಷದ ಅನುಪಸ್ಥಿತಿಯಲ್ಲೇ ಸಭೆ ನಡೆಸಲಾಯಿತು.
ನಿಗದಿತ ಸಮಯಕ್ಕಿಂತ ಬಹಳ ತಡವಾಗಿ ಸಭೆ ಆರಂಭಗೊಂಡಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸಭಾಂಗಣದ ಹೊರಗಡೆ ಬೃಹತ್ ಪ್ರತಿಭಟನೆ ನಡೆಸಿದರು. ಇತ್ತ ಸಭಾಂಗಣದ ಒಳಗಡೆ ಆಡಳಿತ ಪಕ್ಷದ ಕೇವಲ 20ಕ್ಕೂ ಹೆಚ್ಚು ಸದಸ್ಯರು ಹಾಗೂ ಜೆಡಿಎಸ್‌ನ ಸಜೀದ್ ಕಲ್ಯಾಣಿ ಅವರ ಉಪಸ್ಥಿತಿಯಲ್ಲಿ ಸಭೆ ಪ್ರಕ್ರಿಯೆಗಳು ಶುರುವಾದವು. ಸಭೆಗೂ ಮುನ್ನ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ಅಗಲಿದ ಗಣ್ಯರಿಗೆ ಹಾಗೂ ಪೌರಕಾರ್ಮಿಕರಿಗೆ ಸಂತಾಪ ಸೂಚಿಸಲಾಯಿತು.
ಒಳಗೆ ಸಂತಾಪ - ಹೊರಗೆ ಆಕ್ರೋಶ!
ಸಭಾಂಗಣದ ಒಳಗೆ ಮೌನ ಆಚರಿಸಲಾಗುತ್ತಿದ್ದರೆ, ಹೊರಗಡೆ ಬಿಜೆಪಿ ಸದಸ್ಯರ ಆಕ್ರೋಶ ಮುಗಿಲು ಮುಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ವತಃ ಮೇಯರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬಿಜೆಪಿ ಸದಸ್ಯರ ಮನವೊಲಿಸಲು ಯತ್ನಿಸಿದರು. ಆದರೆ, ಇದಕ್ಕೆ ಬಗ್ಗದ ಸದಸ್ಯರು, "ನಮ್ಮನ್ನು ಬಿಟ್ಟೇ ಸಭೆ ಆರಂಭಿಸಿದ್ದೀರಿ, ಈಗ ನೀವೇ ಸಭೆ ನಡೆಸಿ ಇಲ್ಲವೇ ರದ್ದುಗೊಳಿಸಿ" ಎಂದು ಬಿಗಿಪಟ್ಟು ಹಿಡಿದರು.
‘ಪಾಲಿಕೆ ಈಗ ಒಡೆದ ಮನೆ'ಯಾಗಿದೆ:
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ವಿಶಾಲ್ ದರ್ಗಿ, ಈ ಹಿಂದೆ ಖಮರುಲ್ ಇಸ್ಲಾಂ ಹಾಗೂ ಚಂದ್ರಶೇಖರ ಪಾಟೀಲ್ ರೇವೂರ್ ಅವರ ಕಾಲದಲ್ಲಿ ಪಾಲಿಕೆ ಆಡಳಿತ ಹೀಗಿರಲಿಲ್ಲ. ಅವರು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತಿದ್ದರು. ಆದರೆ, ಈಗ ಆ ಸಂಸ್ಕೃತಿ ಮಾಯವಾಗಿದೆ. ಪಾಲಿಕೆ ಇಂದು ಒಡೆದ ಮನೆಯಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನವೊಲಿಕೆ ವಿಫಲ:
ನಾಡಗೀತೆ ಮತ್ತು ರಾಷ್ಟ್ರಗೀತೆಗಿಂತಲೂ ಮೊದಲು ನಮ್ಮನ್ನು ಕರೆಯಬೇಕಿತ್ತು. ಈಗ ಬಂದು ಕರೆದರೆ ನಾವು ಬರುವುದಿಲ್ಲ ಎಂದು ಬಿಜೆಪಿ ಸದಸ್ಯರು ಖಡಾಖಡಿಯಾಗಿ ಹೇಳಿದ್ದರಿಂದ, ಮೇಯರ್ ವರ್ಷಾ ಜಾನೆ ಅವರು ಮನವೊಲಿಕೆ ಯತ್ನ ಕೈಬಿಟ್ಟು ಸಭೆ ಮುಂದುವರಿಸಿದರು. ಮೇಯರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ವಿರುದ್ಧ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶ ಹೊರಹಾಕಿದರು.
ಸಭಾಂಗಣದ ಬಾಗಿಲು ಮುಚ್ಚಿ ಬಿಜೆಪಿ ಸದಸ್ಯರ ಪ್ರತಿಭಟನೆ

ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬುಧವಾರ ತೀವ್ರ ಹೈಡ್ರಾಮಾ ನಡೆದಿದ್ದು, ನಿಗದಿತ ಸಮಯಕ್ಕೆ ಆಡಳಿತ ಪಕ್ಷದ ಸದಸ್ಯರು ಬಾರದಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಸಭಾಂಗಣದ ಬಾಗಿಲು ಮುಚ್ಚಿ ಬೀಗ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಾಮಾನ್ಯ ಸಭೆಗೆ 12 ಗಂಟೆಯಾದರೂ ಆಡಳಿತ ಪಕ್ಷದ ನಾಲ್ಕು ಸದಸ್ಯರು ಬಿಟ್ಟರೇ, ಉಳಿದ ಸದಸ್ಯರ್ಯಾರು ಬರಲಿಲ್ಲ. ಈ ಬೇಜವಾಬ್ದಾರಿತನಕ್ಕೆ ರೊಚ್ಚಿಗೆದ್ದ ವಿರೋಧ ಪಕ್ಷದ ಸದಸ್ಯರು, ಸಭೆಗೆ ಬರಲು ಮನಸ್ಸಿಲ್ಲದವರಿಗೆ, ನಗರದ ಅಭಿವೃದ್ಧಿ ಬಗ್ಗೆ ಎಲ್ಲಿಂದ ಕಾಳಜಿ ಇರುತ್ತದೆ. ಅವರು ಬಂದರೇಷ್ಟು ಬಿಟ್ಟರರೆಷ್ಟು ಎಂದು ಘೋಷಿಸುತ್ತಾ ಸಭಾಂಗಣ ಬಹಿಸ್ಕಾರಿಸಿ ಹೊರನಡೆದರು. ಬಳಿಕ ಮುಖ್ಯ ಬಾಗಿಲು ಮುಚ್ಚುವ ಮೂಲಕ ಪ್ರತಿಭಟನೆ ನಡೆಸಿದರು.
ಸಭಾಂಗಣದ ಬಾಗಿಲಿಗೆ ಅಡ್ಡವಾಗಿ ಕುಳಿತ ಬಿಜೆಪಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಹಾಗೂ ಕಾಂಗ್ರೆಸ್ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ, ಪಾಲಿಕೆಯ ಆಡಳಿತ ಯಂತ್ರ ಸಂಪೂರ್ಣ ಹಳಿ ತಪ್ಪಿದೆ ಎಂದು ಕಿಡಿಕಾರಿದರು.
ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ ಹಾಗೂ ಮಾಜಿ ಮೇಯರ್ ವಿಶಾಲ್ ದರ್ಗಿ ಮಾತನಾಡಿ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಮಗೆ ಆಸಕ್ತಿಯಿದೆ. ಆದರೆ, ಆಡಳಿತ ಪಕ್ಷಕ್ಕೆ ಕೇವಲ ರಾಜಕಾರಣವೇ ಮುಖ್ಯವಾಗಿದೆ. ಬಾಗಿಲು ಮುಚ್ಚುವ ಮೂಲಕ ನಾವು ಆಡಳಿತ ಪಕ್ಷದ ಹಾಗೂ ಸರ್ಕಾರದ ನಡೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಹಿರಿಯ ಸದಸ್ಯ ವಿಜಯಕುಮಾರ್ ಸೇವಾಲಾನಿ, ಮಲ್ಲು ಉದುನೂರು, ವೀರಣ್ಣ ಹೊನ್ನಳ್ಳಿ ಸೇರಿದಂತೆ ಹಲವರು ಭಾಗವಹಿಸಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ವಿರುದ್ಧ ಘೋಷಣೆ ಕೂಗಿದರು.