ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka 2nd PUC Results 2026: ದ್ವಿತೀಯ ಪಿಯು ಫಲಿತಾಂಶ: ಕಲಾ ವಿಭಾಗದಲ್ಲಿ ಕಲಬುರಗಿ ವಿದ್ಯಾರ್ಥಿನಿ ಸೃಷ್ಟಿ ಮಲ್ಲಿನಾಥ ರಾಜ್ಯಕ್ಕೆ ಪ್ರಥಮ

Kalaburagi News: 2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಬುರಗಿ ನಗರದ ಶ್ರೀಮತಿ ವೀರಮ್ಮ ಗಂಗಸಿರಿ (ವಿಜಿ) ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಮಲ್ಲಿನಾಥ ಅವರು ಕಲಾ ವಿಭಾಗದಲ್ಲಿ ಒಟ್ಟು 600 ಅಂಕಗಳಲ್ಲಿ 598 ಅಂಕಗಳನ್ನು ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆಯುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಪಡೆದ ಕಲಬುರಗಿ ವಿದ್ಯಾರ್ಥಿನಿ ಸೃಷ್ಟಿ ಮಲ್ಲಿನಾಥ.

ಕಲಬುರಗಿ, ಏ.9: 2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (Karnataka 2nd PUC Results 2026) ಕಲಬುರಗಿಯ ಪ್ರತಿಭೆ ಸೃಷ್ಟಿ ಮಲ್ಲಿನಾಥ ಅವರು ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ನಗರದ ಶ್ರೀಮತಿ ವೀರಮ್ಮ ಗಂಗಸಿರಿ (ವಿಜಿ) ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, ಒಟ್ಟು 600 ಅಂಕಗಳಲ್ಲಿ 598 ಅಂಕಗಳನ್ನು ಪಡೆಯುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾರೆ.

ಸೃಷ್ಟಿ ಅವರು ಭಾಷಾ ವಿಷಯ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಶೇ. 100 ರಷ್ಟು ಅಂಕಗಳನ್ನು ಗಳಿಸಿದ್ದು, ಕನ್ನಡದಲ್ಲಿ 100, ಇಂಗ್ಲಿಷ್ ನಲ್ಲಿ 99, ಇತಿಹಾಸದಲ್ಲಿ 99, ಅರ್ಥಶಾಸ್ತ್ರದಲ್ಲಿ 100, ಸಮಾಜಶಾಸ್ತ್ರದಲ್ಲಿ 100, ರಾಜಕೀಯ ಶಾಸ್ತ್ರದಲ್ಲಿ 100 ಅಂಕ ಗಳಿಸಿ ಜೀವನದ ಅತ್ಯಮೂಲ್ಯ ಸಾಧನೆ ಮಾಡಿದ್ದಾಳೆ.

ನನಸಾದ ಎರಡು ವರ್ಷಗಳ ಕನಸು

ವಿದ್ಯಾರ್ಥಿನಿಯ ಈ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಮೋಹನ್ ರಾಜ್ ಪತ್ತಾರ, ಇದು ನಮ್ಮ ಕಾಲೇಜಿಗೆ ಮಾತ್ರವಲ್ಲ, ಇಡೀ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ಕ್ಷಣ. ನಮ್ಮ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ ಪಡೆಯಬೇಕು ಎನ್ನುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ನಾವು ನಡೆಸಿದ ನಿರಂತರ ಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಕಳೆದ ವರ್ಷ 587 ಅಂಕಗಳೊಂದಿಗೆ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದೆವು, ಈ ಬಾರಿ ಸೃಷ್ಟಿ ರಾಜ್ಯಕ್ಕೇ ಮೊದಲ ಸ್ಥಾನ ತಂದುಕೊಡುವ ಮೂಲಕ ನಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದರು.

ಈ ಸಾಧನೆಯ ಹಿಂದೆ ಪಾಲಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ಎಚ್.ಕೆ.ಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ ಸೇರಿದಂತೆ ಆಡಳಿತ ಮಂಡಳಿಯ ಸಹಕಾರ ಅಪಾರವಾಗಿದೆ ಎಂದು ಅವರು ಸ್ಮರಿಸಿದರು.

ಸೃಷ್ಟಿ ಮಲ್ಲಿನಾಥ ಅವರ ಈ ಐತಿಹಾಸಿಕ ಸಾಧನೆಗೆ ಜಿಲ್ಲೆಯಾದ್ಯಂತ ಶಿಕ್ಷಣ ಪ್ರೇಮಿಗಳು, ಗಣ್ಯರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿನಿಯ ಸಾಧನೆ ಇತರರಿಗೂ ಸ್ಫೂರ್ತಿಯಾಗಿದೆ.

image

ನಾನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಜೀವನದಲ್ಲಿ ಒಮ್ಮೆಯಾದರೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ನನ್ನ ಪಾಲಕರು ಮತ್ತು ಕಲಿಸಿದ ಶಿಕ್ಷಕರ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಆಸೆಯಿತ್ತು. ಆ ಕನಸು ಇಂದು ನನಸಾಗಿದೆ. ಎಲ್ಲರ ಪ್ರೀತಿ ಮತ್ತು ಮಾರ್ಗದರ್ಶನದಿಂದ ಈ ಮೈಲಿಗಲ್ಲು ತಲುಪಲು ಸಾಧ್ಯವಾಗಿದೆ, ಈ ಫಲಿತಾಂಶ ನನಗೆ ಅಪಾರ ಸಂತಸ ನೀಡಿದೆ.

- ಸೃಷ್ಟಿ ಮಲ್ಲಿನಾಥ, ರಾಜ್ಯಕ್ಕೆ ಪ್ರಥಮ (ಕಲಾ ವಿಭಾಗ)