ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shrikanth Shetty Karkala: ರೌಡಿಶೀಟರ್ ದಾಖಲೆಯೊಂದೇ ನಿರ್ಬಂಧಕ್ಕೆ ಕಾರಣವಾಗದು; ಶ್ರೀಕಾಂತ್ ಶೆಟ್ಟಿ ಕಾರ್ಕಳ ಭಾಷಣಕ್ಕೆ ಹೈಕೋರ್ಟ್ ಷರತ್ತುಬದ್ಧ ಅಸ್ತು

ಹೈಕೋರ್ಟ್ ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ‌. ಅ.1ರಂದು ನಡೆಯಲಿರುವ ಹಿಂದೂ ಮಹಾಗಣಪತಿ ಉತ್ಸವದ ವೇದಿಕೆಯಲ್ಲಿ ಶ್ರೀಕಾಂತ್ ಶೆಟ್ಟಿ ಭಾಷಣ ಮಾಡಬಹುದಾಗಿದ್ದು, ರಾತ್ರಿ 8.45ರೊಳಗೆ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಕಲಬುರಗಿ: ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ (Shrikanth Shetty Karkala) ಅವರ ಭಾಷಣಕ್ಕೆ ಕಲಬುರಗಿ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಕೇವಲ ರೌಡಿಶೀಟರ್ ಎಂದು ದಾಖಲಿಸಿರುವ ಕಾರಣಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಅರ್ಜಿದಾರ ಶ್ರೀಮಂತ ರಾಜು ನವಲದಿ ಪರ ಹಿರಿಯ ವಕೀಲ ಶ್ರವಣಕುಮಾರ ಮಠ್ ವಾದ ಮಂಡಿಸಿದರು.

ಶ್ರೀಕಾಂತ್ ಶೆಟ್ಟಿ ಅವರ ವಿರುದ್ಧ ರೌಡಿಶೀಟರ್ ದಾಖಲಿಸಲಾಗಿದೆ ಎಂಬ ಅಂಶವನ್ನು ಮಾತ್ರ ಆಧರಿಸಿ ಅವರ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ, ಅವರು ರೌಡಿಶೀಟರ್ ಎಂಬುದು ಸಾಬೀತಾಗಿರುವುದಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಪರಿಗಣಿಸಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಂಪೂರ್ಣ ನಿರ್ಬಂಧ ವಿಧಿಸದೆ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಲವು ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಅನುಮತಿ ನೀಡಿದೆ.

ಅ.1ರಂದು ನಡೆಯಲಿರುವ ಹಿಂದೂ ಮಹಾಗಣಪತಿ ಉತ್ಸವದ ವೇದಿಕೆಯಲ್ಲಿ ಶ್ರೀಕಾಂತ್ ಶೆಟ್ಟಿ ಭಾಷಣ ಮಾಡಬಹುದಾಗಿದ್ದು, ರಾತ್ರಿ 8.45ರೊಳಗೆ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಅಲ್ಲದೆ, ಭಾಷಣದ ವೇಳೆ ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯಕ್ಕೆ ಅವಕಾಶ ನೀಡಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಹೀಗಾಗಿ ಶ್ರೀಕಾಂತ್ ಶೆಟ್ಟಿ ಅವರ ಕಾರ್ಯಕ್ರಮಕ್ಕೆ ಇದ್ದ ನಿರ್ಬಂಧದ ವಿಚಾರದಲ್ಲಿ ನ್ಯಾಯಾಲಯದ ಆದೇಶದಿಂದ ಹೊಸ ಬೆಳವಣಿಗೆ ಕಂಡುಬಂದಿದ್ದು, ಕಾರ್ಯಕ್ರಮ ಆಯೋಜಕರು ಹಾಗೂ ಭಾಷಣಕಾರರು ನ್ಯಾಯಾಲಯದ ಎಲ್ಲ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.